ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನಲ್ಲಿದ್ದ ಪ್ಯಾಲೆಸ್ತೀನ್ ಕಾರ್ಪ್ಸ್‌ನ ಕಮಾಂಡರ್, ಇರಾನ್ ಮತ್ತು ಹಮಾಸ್ ನಡುವಿನ ಪ್ರಮುಖ ಸಂಪರ್ಕದಂತೆ ಕಾರ್ಯ ನಿರ್ವಹಿಸುತ್ತಿದ್ದ ಬೆಹ್ನಮ್ ಶಹರಿಯಾರಿಯನ್ನು ಇಸ್ರೇಲ್ ಪಡೆಯು ಹತ್ಯೆ ಮಾಡಿದೆ.
ಪಶ್ಚಿಮ ಇರಾನ್‌ನಲ್ಲಿ ಬೆಹ್ನಮ್ ಶಹರಿಯಾರಿ ಕಾರಿನಲ್ಲಿ ಪ್ರಯಾಣಿಸುತ್ತಿದಾರೆಂಬ ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಇಸ್ರೇಲ್ ಪಡೆ 1,000 ಕಿ.ಮೀ ದೂರದಿಂದ ನಿಖರ ದಾಳಿ ಮಾಡಿ ಹತ್ಯೆಗೈದಿದೆ. ಕಾರಿನ ಮೇಲೆ ದಾಳಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.
2023 ರಲ್ಲಿ ಹಮಾಸ್ ಉಗ್ರರು ಇಸ್ರೇಲ್ ಒಳಗಡೆ ನುಗ್ಗಿ ದಾಳಿ ನಡೆಸಿ ಹತ್ಯಾಕಾಂಡ ಮಾಡಿದ್ದರು. ಹಮಾಸ್ ನಡೆಸಿದ ಈ ಹತ್ಯಾಕಾಂಡಕ್ಕೆ ಶಹರಿಯಾರಿ ಎಲ್ಲ ಬಗೆಯ ನೆರವು ನೀಡಿದ್ದರು ಎನ್ನಲಾಗಿದೆ. ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ, ಉಗ್ರರಿಗೆ ಹಣಕಾಸು ನೆರವು, ಭಯೋತ್ಪಾದಕ ತರಬೇತಿ ಕಾರ್ಯಕ್ರಮಗಳು ಶಹರಿಯಾರಿ ಮೂಲಕವೇ ನಡೆಯುತ್ತಿತ್ತು ಎಂದು ಇಸ್ರೇಲ್ ಹೇಳಿದೆ.