ಇರಾನ್ ಹಾಗೂ ಇಸ್ರೇಲ್ ನಡುವಿನ ಬಿಕ್ಕಟ್ಟು ಈಗ ಯುದ್ಧ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ನಡೆಸಿರುವ ದಾಳಿಗೆ ಇರಾನ್ ಪ್ರತಿ ದಾಳಿ ಮಾಡಲು ಸಜ್ಜಾಗುತ್ತಿದೆ.
ಅಮೆರಿಕ ದಾಳಿ ಮಾಡಿ ತಪ್ಪು ಮಾಡಿದೆ. ಇದೀಗ ಅಮೆರಿಕದ ಪ್ರತಿಯೊಬ್ಬ ಪ್ರಜೆ ನಮ್ಮ ಟಾರ್ಗೆಟ್ ಎನ್ನುವ ಘೋಷವಾಕ್ಯಗಳು ಇರಾನ್‌ನಲ್ಲಿ ಕೇಳಿ ಬರುತ್ತಿವೆ. ಅಮೆರಿಕ ದಾಳಿಯನ್ನು ಇರಾನ್ ಮಾಧ್ಯಮಗಳು ಖಂಡಿಸಿದೆ. ಇರಾನ್ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ಅಮರಿಕದ ಪ್ರಜೆ, ಅಮೆರಿಕ ಮಿಲಿಟರಿಯ ಪ್ರತಿಯೊಬ್ಬ ಯೋಧನು ಇರಾನಿಗಳ ಟಾರ್ಗೆಟ್. ಈ ಯುದ್ಧ ಮತ್ತೊಂದು ಹಂತಕ್ಕೆ ಸಾಗಲಿದೆ ಎಂದು ಇರಾನ್ ಮಾಧ್ಯಮಗಳು ಎಚ್ಚರಿಕೆ ನೀಡಿವೆ.
ಮಿಸ್ಟರ್ ಟ್ರಂಪ್ ಯುದ್ಧ ಆರಂಭಗೊಂಡಿದೆ. ಈ ಯುದ್ಧದ ನಡುವೆ ಅನಗತ್ಯವಾಗಿ ತೂರಿ ಬಂದಿದ್ದೀರಿ. ಈಗ ನೀವು ಶಾಂತಿಯ ಮಾತನಾಡುತ್ತಿದ್ದೀರಿ. ನೀವು ಮಾಡಿದ ತಪ್ಪಿಗೆ ಬೆಲೆ ತೆರಬೇಕು ಎಂದು ಇರಾನ್ ಮಾಧ್ಯಮಗಳು ಮಾತಿನ ಯುದ್ಧ ಆರಂಭಿಸಿವೆ.
ಇಸ್ರೇಲ್ ಹಾಗೂ ಇರಾನ್ ಯುದ್ಧ ಆರಂಭಗೊಂಡ ಬೆನ್ನಲ್ಲೇ ಭಾರತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆಗ್ರಹಿಸಿತ್ತು. ಅಮೆರಿಕ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ ಶೀಘ್ರದಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮವು ವರದಿ ಮಾಡಿದೆ. ಇರಾನ್‌ನ ಪರಮಾಣು ಸ್ಥಾವರಗಳ ಮೇಲಿನ ದಾಳಿಯ ನಂತರ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿದೆ. ಇರಾನ್ ವಿರುದ್ಧದ ದಾಳಿಯನ್ನು ವರ್ಷದ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಅಭ್ಯಾಸ ಮಾಡಿದ್ದವು ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.