ಇರಾನ್ ಮೇಲೆ ಇಸ್ರೇಲ್- ಅಮೆರಿಕ ದಾಳಿ ಮತ್ತು ಇರಾನ್ ಪ್ರತಿದಾಳಿ ಮುಂದುವರಿದಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬೆಳವಣಿಗೆ ಆತಂಕ ಹುಟ್ಟಿಸಿದ್ದು, ಶಾಂತಿ ಕಾಪಾಡುವಂತೆ ಹಲವು ರಾಷ್ಟ್ರಗಳು ಕರೆ ನೀಡಿವೆ.
ಯುದ್ಧ ಆರಂಭಗೊಂಡು ೧೮ ದಿನಗಳಾಗುತ್ತಿದ್ದು, ಇರಾನ್ ರಾಜಧಾನಿ ಟೆಹ್ರಾನ್ ಹಾಗೂ ಲೆಬನಾನ್ ದೇಶದ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ವಾಯುದಾಳಿಗಳನ್ನು ನಡೆಸಿದೆ. ಟೆಹ್ರಾನ್ ನಗರದಲ್ಲಿನ ಸೇನೆ ಮತ್ತು ಆಡಳಿತ ಸಂಬಂಧಿತ ಪ್ರಮುಖ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗಿದೆ. ಬೈರೂತ್ ನಗರದಲ್ಲಿರುವ ಸೇನಾ ನೆಲೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆದಿದೆ.
ಈ ದಾಳಿಗಳಿಗೆ ಪ್ರತಿಯಾಗಿ ಇರಾನ್ ದೇಶವು ಕ್ಷಿಪಣಿಗಳು ಮತ್ತು ಡ್ರೋನ್ ಮೂಲಕ ಇಸ್ರೇಲ್ ಪ್ರದೇಶಗಳ ಮೇಲೆ ಪ್ರತಿದಾಳಿ ನಡೆಸಿದ್ದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಪರಿಸ್ಥಿತಿ ಕಳವಳಕಾರಿಯಾಗಿದೆ ಎನ್ನಲಾಗುತ್ತಿದೆ. ಲೆಬನಾನ್ನಲ್ಲಿ ದಾಳಿಗಳ ಪರಿಣಾಮ ನಾಗರಿಕರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ವರದಿಯಾಗಿದೆ.
ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ಮಧ್ಯಪ್ರಾಚ್ಯದಲ್ಲಿ ಭದ್ರತಾ ಎಚ್ಚರಿಕೆ ಕ್ರಮಗಳನ್ನು ಹೆಚ್ಚಿಸಲಾಗಿದೆ. ಈ ದಾಳಿಗಳು ದೊಡ್ಡ ಮಟ್ಟದ ಪ್ರಾದೇಶಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಭೀತಿಯನ್ನು ಹೆಚ್ಚಿಸುತ್ತಿವೆ. ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆದಿದ್ದು ಆತಂಕ ಹೆಚ್ಚಿದೆ.
ಬಾಗ್ದಾದ್ನಲ್ಲಿನ ಅಮೆರಿಕ ರಾಯಭಾರ ಕಚೇರಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಅನೇಕ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕಚೇರಿ ಆವರಣದ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ. ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿಗಳನ್ನು ತಡೆದಿರುವುದಾಗಿ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದಲೂ ಬಾಗ್ದಾದ್ನಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ರಾಯಭಾರ ಕಚೇರಿ ಆವರಣದ ಹೆಲಿಪ್ಯಾಡ್ ಭಾಗಕ್ಕೂ ಕ್ಷಿಪಣಿ ದಾಳಿಯಅಗಿತ್ತು. ಕಚೇರಿಯ ಮೇಲೆಯೇ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.


