ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು (ಸೋಮವಾರ) ಇರಾನ್ ಡ್ರೋನ್ ದಾಳಿ ನಡೆಸಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಡ್ರೋನ್ ಇಂಧನ ಟ್ಯಾಂಕ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಪರಿಹಾರ ತಂಡಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ದುಬೈ ನಾಗರಿಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ನ ಪ್ರತೀಕಾರದ ದಾಳಿಯ ನಡುವೆ ಪಶ್ಚಿಮ ಇರಾನ್ನಲ್ಲಿ ಬೃಹತ್ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲ್ ಪಡೆಗಳು ಇರಾನ್ ಆಡಳಿತದ ಮಿಲಿಟರಿ ಮತ್ತು ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ಬೃಹತ್ ದಾಳಿ ನಡೆಸಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್ ಡಾಲರ್ ಅಂದರೆ 7,656 ಕೋಟಿ ರೂ. ಮೊತ್ತದ ತುರ್ತು ಬಜೆಟ್ ಹಂಚಿಕೆಗೆ ಅನುಮೋದನೆ ನೀಡಿದೆ.
ಕ್ಯಾಬಿನೆಟ್ ಮಂತ್ರಿಗಳ ಸಭೆಯಲ್ಲಿ ಈ ಪ್ಯಾಕೇಜ್ಗೆ ಒಪ್ಪಿಗೆ ನೀಡಲಾಗಿದೆ, ಈ ನಿಧಿಯನ್ನು ಭದ್ರತಾ ಖರೀದಿಗಳು ಹಾಗೂ ತುರ್ತು ಅಗತ್ಯಗಳು ಪೂರೈಸಲು ಬಳಸಲಾಗುವುದು ಎಂದು ವರದಿ ತಿಳಿಸಿದೆ. ಇಸ್ರೇಲ್ ಇರಾನ್ನಲ್ಲಿ ಕನಿಷ್ಟ ಮೂರು ವಾರಗಳ ಕಾರ್ಯಾಚರಣೆಗೆ ಯೋಜನೆಗಳನ್ನು ರೂಪಿಸಿದ್ದಾಗಿ ಹೇಳಿಕೊಂಡಿದೆ. ಐಡಿಎಫ್ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್, ಈ ಅವಧಿಯಲ್ಲಿ ಸಾವಿರಾರು ಗುರಿಗಳನ್ನು ಹೊಡೆಯಬಹುದು, ಅಮೆರಿಕದ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ಈಗ ಯುದ್ಧ ಮುಗಿಸುವ ಆಸಕ್ತಿ ಹೊಂದಿದೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್, ಯುದ್ಧವು ವಾರಗಳಲ್ಲಿ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಇರಾನ್ ಜೊತೆಗಿನ ಯುದ್ಧ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.


