ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಉದ್ವಿಗ್ನಗೊಂಡಿದ್ದು, ನಾನಾ ದೇಶಗಳಿಗೆ ಇಂಧನ, ಎಲ್ಪಿಜಿ ಪೂರೈಕೆ ವ್ಯತ್ಯಗೊಂಡು ಹಲವು ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ.
ಈ ಯುದ್ಧವು ಭಾರತದ ವೈದ್ಯಕೀಯ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಔಷಧಿಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಔಷಧಿಗಳ ಬೆಲೆ ಶೇಕಡಾ 10 ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಫಾರ್ಮ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ನ ಅಧ್ಯಕ್ಷ ಸಿ ಜಯರಾಮ್ ಮತ್ತು ಸದಸ್ಯ ಮಹೇಶ್ ಕಳವಳ ವ್ಯಕ್ತಪಡಿಸಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ಔಷಧಿಗಳ ಪೂರೈಕೆಯಲ್ಲಿ ತೊಂದರೆ ಇಲ್ಲ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ. ಪೆಟ್ರೋಕೆಮಿಕಲ್ಸ್ ಮತ್ತು ಎಕ್ಸಿಪಿಯೆಂಟ್ಸ್ (ಬೈಂಡಿಂಗ್ ಏಜೆಂಟ್, ಸ್ಟಾರ್ಚ್ ಪೌಡರ್) ಬೆಲೆಗಳು ಈಗಾಗಲೇ ಹೆಚ್ಚಾಗಿವೆ. ಎರಡು-ಮೂರು ತಿಂಗಳ ನಂತರ ಮಾರುಕಟ್ಟೆಗೆ ಬರುವ ಹೊಸ ಔಷಧಿಗಳ ಬೆಲೆ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಅಭಾವ ಉಂಟಾಗಿ ದೇಶದ ಹೆಚ್ಚಿನ ದೊಡ್ಡ ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಯನಿರ್ವಹಿಸುವ ಹೋಟೆಲ್ಗಳು ದರ ಏರಿಸಿವೆ. ತರಕಾರಿಗಳು ಸೇರಿದಂತೆ ಬೆಳೆದ ಉತ್ಪನ್ನಗಳಿಗೆಬೆಲೆ ಸಿಗದೆ ದೇಶದ ರೈತರು ಕಂಗೆಟ್ಟಿದ್ದಾರೆ.
ಎಲ್ಪಿಜಿ ವ್ಯತ್ಯಯದಿಂದಾಗಿ ಆಟೊಗಳ ಕಾರ್ಯಾಚರಣೆ ತಗ್ಗಿದ್ದು, ಪ್ರಯಾಣಿಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ನಗರಗಳಲ್ಲಿ ಹಾಸ್ಟೆಲ್, ಪಿಜಿಗಳನ್ನು ನಡೆಸುವುದು ತ್ರಾಸದಾಯಕವಾಗಿ ಪರಿಣಮಿಸಿದ್ದು, ಹಲವು ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.


