Menu

ಇರಾನ್-ಇಸ್ರೇಲ್ ಕದನ ವಿರಾಮ: ಮೋದಿಯ ವಿದೇಶಾಂಗ ನೀತಿ ಏನು

ಭಾರತದ ವಸುದೈವ ಕುಟುಂಬಕಂ ಸಿದ್ದಾಂತ ಇಂದಿನದಲ್ಲ.ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದ ಶಾಂತಿ ಪಾಲನೆಯ ಸೂತ್ರಗಳೂ ೧೯೪೭ರ ಬಳಿಕ ಜನಿಸಿದ್ದಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವ ಭಾರತವು, ಇರಾನ್- ಇಸ್ರೇಲ್ ಕದನ ವಿರಾಮದ ವಿಚಾರದಲ್ಲಿ ಪಾಕ್‌ಗಿಂತಲೂ ಮುಂದೆ ಇರಬೇಕಿತ್ತು. ಒಟ್ಟಿನಲ್ಲಿ ಈ ವಿಚಾರದಲ್ಲಿ ಮೋದಿ ಸರ್ಕಾರದ ಸ್ಪಷ್ಟ ನಿಲುವೇನು ಎಂಬುದೇ ಅಸ್ಪಷ್ಟ. ಈ ದಿಶೆಯಲ್ಲಿ ದಿಟ್ಟ ನಿಲುವು ತಾಳಲು ಮೋದಿ ಸರ್ಕಾರ ಹಿಂದೇಟು ಹಾಕಿದ್ದು ನಿಗೂಢ ಮತ್ತು ಸೋಜಿಗ.

ಇರಾನ್- ಇಸ್ರೇಲ್ ಕದನ ವಿರಾಮಕ್ಕೆ ಪಾಕಿಸ್ಥಾನ ಪೌರೋಹಿತ್ಯ ವಹಿಸಿದೆ. ಈ ಸಂಬಂಧ ಇರಾನ್ ಜೊತೆ ದೂರವಾಣಿ ಮೂಲಕ ಪಾಕ್ ಪ್ರಧಾನಿ ಸಂಧಾನ ಸೂತ್ರಗಳನ್ನು ಮುಂದಿಟ್ಟಿರುವುದು ಗಮನಾರ್ಹ. ಇದೇ ವೇಳೆ ಕದನ ವಿರಾಮಕ್ಕೂ ಮುನ್ನ ನಂಬಿಕೆ ಮತ್ತು ವಿಶ್ವಾಸ ಮುಖ್ಯ ಎಂದು ಇರಾನ್ ಸೂಚ್ಯವಾಗಿ ತಿಳಿಸಿದೆ.

ಮಧ್ಯ ಪ್ರಾಚ್ಯದ ಕದನ ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಹರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆ ಹಡಗುಗಳು ಹಾದು ಹೋಗಲು ಇರಾನ್ ಭಾರತವೂ ಸೇರಿದಂತೆ ಕೆಲ ಮಿತ್ರ ದೇಶಗಳಿಗೆ ಅನುಮತಿ ನೀಡಿರುವುದು ಸರಿ. ಆದರೆ ಅಮೆರಿಕ ಮತ್ತು ಮಿತ್ರ ದೇಶಗಳಿಗೆ ಇರಾನ್ ಈ ವಿಚಾರದಲ್ಲಿ ಯಾವುದೇ ರಿಯಾಯ್ತಿ ತೋರಿಲ್ಲ. ಯುದ್ಧ ಬೇಡ ಎನ್ನುವ ಸ್ಥಿತಿಯಲ್ಲಿ ಅಮೆರಿಕ ಇದೆ ಎಂದರೆ ಅತಿಶಯವಲ್ಲ. ಏಕೆಂದರೆ, ಯುದ್ಧ ಆರಂಭವಾದ ಮೊದಲ ವಾರದಲ್ಲಿ ಟ್ರಂಪ್ ಹೇಳಿದ್ದು ಇಲ್ಲಿ ಉಲ್ಲೇಖಾರ್ಹ. ಇರಾನ್ ಮೇಲೆ ಘೋಷಿಸಲಾದ ಈ ಯುದ್ಧವನ್ನು ಅಮೆರಿಕ ಅತಿ ಬೇಗ ಮುಗಿಸಲೆತ್ನಿಸುತ್ತೆ ಎಂದು ಟ್ರಂಪ್ ಎಂದಿದ್ದರು. ಆದರೆ ಯುದ್ಧ ಆರಂಭವಾಗಿ ನಾಲ್ಕು ವಾರ ಕಳೆದಿದ್ದು ಈಗ ಪರಿಸ್ಥಿತಿ ತಿರುಗು ಮರಗಾಗಿದೆ. ದಿನೇ ದಿನೇ ಇರಾನ್ ಬಿಗಿಪಟ್ಟು ಮತ್ತು ಆಧಿಕ್ಯ ಹೆಚ್ಚಾಗತೊಡಗಿದೆ. ಈ ಯುದ್ದದಿಂದ ಇರಾನ್‌ಗಿಂತಲೂ ಇಸ್ರೇಲ್ ಮತ್ತು ಕೊಲ್ಲಿ ದೇಶಗಳಿಗೆ ಅಲ್ಲದೆ ಅಮೆರಿಕ ದೇಶಕ್ಕೆ ಭಾರಿ ಹಾನಿ ಮತ್ತು ನಷ್ಟವಾಗಿದೆ. ಹೀಗಾಗಿ ಅಮೆರಿಕ ಈಗ ಪರೋಕ್ಷವಾಗಿ ಯುದ್ಧದಲ್ಲಿ ಹಿನ್ನಡೆಯನ್ನು ಅನುಭವಿಸುವಂತಾಗಿರುವುದು ವಾಸ್ತವ.

ಇದು ಹಾಗಿರಲಿ.ಯಾರಿಗೂ ಬೇಡವಾಗಿದ್ದ ಯುದ್ಧವನ್ನು ನಿಲ್ಲಿಸಲು ಪಾಕಿಸ್ಥಾನ ಮುಂದಾಗಿರುವುವುದು ಮುಖ್ಯ. ಈ ವಿಚಾರದಲ್ಲಿ ಭಾರತವೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗೆ ಸರಿಯಾದ ಉತ್ತರವಂತೂ ಸದ್ಯ ದೊರೆಯುತ್ತಿಲ್ಲ. ಭಾರತದ ರಾಜತಾಂತ್ರಿಕತೆ ಈ ವಿಚಾರದಲ್ಲಿ ಪಾಕಿಸ್ಥಾನಕ್ಕಿಂತಲೂ ಹಿಂದುಳಿದಿದ್ದು ಏಕೆ ಎಂಬುದು ನಿಗೂಢ.

ಕದನ ವಿರಾಮದ ವಿಚಾರದಲ್ಲಿ ಭಾರತ ಒಂದು ಬ್ರೋಕರ್ ದೇಶವಾಗಲು ಇಚ್ಚಿಸುವುದಿಲ್ಲ ಎಂದರೆ ಇದರ ಒಳಾರ್ಥವೇನು ? ಅಲ್ಲದೆ ಭಾರತದ ಹಿಂದಿನ ವಿದೇಶಾಂಗ ನೀತಿಯೇ ಬೇರೆ. ಇಂದಿನ ನೀತಿಯೇ ಬೇರೆ ಎಂದು ದೇಶದ ಪ್ರಧಾನಿ ಮೋದಿ ಹೇಳಿರುವುದು ಗಮನಾರ್ಹ. ಹಾಗಾದರೆ ಭಾರತದ ಇದುವರೆಗಿನ ವಿದೇಶಾಂಗ ನೀತಿ ಈಗ ಬದಲಾಗಿದೆಯೇ ? ಇಲ್ಲಿಯವರೆಗೆ ಪಾಲನೆಯಾದ ಭಾರತದ ವಿದೇಶಾಂಗ ನೀತಿಯನ್ನು ಪ್ರತಿಪಾದಿಸಲು ಮತ್ತು ಪಾಲನೆ ಮಾಡಲು ಮೋದಿ ಸರ್ಕಾರಕ್ಕೇನಾದರೂ ತೊಂದರೆ ಇದೆಯೇ ?

ಭಾರತದ ವಸುದೈವ ಕುಟುಂಬಕಂ ಸಿದ್ದಾಂತ ಇಂದಿನದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದ ಶಾಂತಿ ಪಾಲನೆಯ ಸೂತ್ರಗಳೂ ೧೯೪೭ರ ಬಳಿಕ ಜನಿಸಿದ್ದಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವ ಭಾರತವು, ಇರಾನ್- ಇಸ್ರೇಲ್ ಕದನ ವಿರಾಮದ ವಿಚಾರದಲ್ಲಿ ಪಾಕ್‌ಗಿಂತಲೂ ಮುಂದೆ ಇರಬೇಕಿತ್ತು. ಒಟ್ಟಿನಲ್ಲಿ ಈ ವಿಚಾರದಲ್ಲಿ ಮೋದಿ ಸರ್ಕಾರದ ಸ್ಪಷ್ಟ ನಿಲುವೇನು ಎಂಬುದು ಅಸ್ಪಷ್ಟ. ದಿಟ್ಟ ನಿಲುವು ತಾಳಲು ಮೋದಿ ಸರ್ಕಾರ ಹಿಂದೇಟು ಹಾಕಿದ್ದು ನಿಗೂಢ ಮತ್ತು ಸೋಜಿಗ.

Related Posts

Leave a Reply

Your email address will not be published. Required fields are marked *