ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಭೀತಿ ಎದುರಾಗಿರುವ ಹಿನ್ನೆಲೆ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಟೆಹ್ರಾನ್ನ ಗುಪ್ತ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಟೆಹ್ರಾನ್ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಅಲ್ಲಿನ ಆಡಳಿತವು ಹಿಂಸಾಚಾರ ಕ್ರಮ ಕೈಗೊಳ್ಳುತ್ತಿರುವಂತೆ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಭೀತಿ ಎದುರಾಗಿದೆ. ಈ ಹಿನ್ನೆಲೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಟೆಹ್ರಾನ್ನ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಖಮೇನಿ ರಹಸ್ಯವಾದ ಸ್ಥಳ ಸೇರಿಕೊಂಡಿದ್ದಾರೆ. ರಹಸ್ಯ ಸ್ಥಳ ಕೋಟೆಯಾಗಿದ್ದು, ಸುರಂಗ ಮಾರ್ಗಗಳೂ ಇವೆ ಎನ್ನಲಾಗಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, ಟೆಹ್ರಾನ್ ಮೇಲೆ ಅಮೆರಿಕದ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಖಮೇನಿ ಭೂಗತ ಸ್ಥಳಕ್ಕೆ ಸ್ಥಳ ಸೇರಿಕೊಂಡಿದ್ದಾರೆ. ಖಮೇನಿ ಇರುವ ಬಂಕರ್ ಭದ್ರತೆಗಾಗಿ ವಿನ್ಯಾಸಗೊಳಿಸಲಾದ ಸುರಂಗ ಮಾರ್ಗಗಳ ವ್ಯವಸ್ಥೆ ಹೊಂದಿದೆ ಎಂದು ವರದಿಯಾಗಿದೆ. ಇರಾನ್ನ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಖಮೇನಿ ತಲೆಮರೆಸಿಕೊಂಡಿದ್ದರೂ ಮೂರನೇ ಮಗ ಮಸೌದ್ ಖಮೇನಿ ತಂದೆಯ ಕಚೇರಿಯಲ್ಲಿ ದೈನಂದಿನ ಕಾರ್ಯಾಚರಣೆ ನಿರ್ವಹಿಸುತ್ತಿದ್ದಾರೆ.
ಪ್ರತಿಭಟನಾಕಾರರ ಮೇಲಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಹೊಸ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾನ್ನಲ್ಲಿ ಯುದ್ಧದ ಭೀತಿ ಎದುರಾಗಿದೆ. ಇರಾನ್ ಕಡೆಗೆ ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ ಎಂದು ಟ್ರಂಪ್ ಈಗಾಗಲೇ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕವು ಈ ಪ್ರದೇಶಕ್ಕೆ ದೊಡ್ಡ ಪ್ರಮಾಣದ ನೌಕಾಪಡೆಯನ್ನು ನಿಯೋಜಿಸಿದೆ, ಅದನ್ನು ಬಳಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದಾರೆ. ಪ್ರತಿಭಟನಾಕಾರರ ಹತ್ಯೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಆಗಾಗ ಬೆದರಿಕೆ ಹಾಕುತ್ತಲೇ ಇದ್ದಾರೆ.


