ಐಪಿಲ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಿ, ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಪ್ರಕರಣವನ್ನು ಮುಚ್ಚಿಹಾಕಲು ಸಿಎಂ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದು, ಈಗ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ವಾಮಮಾರ್ಗ ಹುಡುಕಿಕೊಂಡಿದೆ ಎಂದು ಅಶೋಕ್ ದೂರಿದ್ದಾರೆ.
ಐಪಿಲ್ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಮುಚ್ಚಿಹಾಕಲು ಸಿಎಂ @siddaramaiah ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದು, ಈಗ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ವಾಮಮಾರ್ಗ… pic.twitter.com/veL6039NS2
— R. Ashoka (@RAshokaBJP) July 24, 2025
ಈ ಮೊದಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ನ್ಯಾಯಾಂಗ ತನಿಖೆಗೆ ಅರ್ಹವಾಗಿರುವ ಈ ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿತ್ತು. ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿ, ಕ್ರಿಕೆಟ್ ಸಂಸ್ಥೆಯ ಮೇಲೆ ಎಫ್‌ಐಆರ್ ದಾಖಲಿಸಿತ್ತು. ಜಿಲ್ಲಾಧಿಕಾರಿಗಳ ಹಂತದ ತನಿಖೆ ನಡೆಸಿ ಪ್ರಕರಣದ ಗಂಭೀರತೆಯನ್ನು ಮರೆಮಾಚುವ ಷಡ್ಯಂತ್ರ ನಡೆಸಿತ್ತು ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಸರ್ಕಾರವೇ ಈ ಪ್ರಕರಣದ ಹೊಣೆ ಹೊರಬೇಕು. ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟವೇ ಇದರ ಹೊಣೆ ಹೊತ್ತು ನ್ಯಾಯಾಂಗ ತನಿಖೆ ಎದುರಿಸಬೇಕು. ಕಾಂಗ್ರೆಸ್ ನಾಯಕರ ಫೋಟೋ ಗೀಳಿಗಾಗಿ, ಆಟಗಾರರ ಶ್ರಮವನ್ನು ಹೈಜಾಕ್ ಮಾಡಿ ಪಕ್ಷಕ್ಕೆ ಮೈಲೇಜ್ ತಂದುಕೊಳ್ಳುವ ಹಪಾಹಪಿಯಿಂದ 11 ಜನ ಅಮಾಯಕರನ್ನು ಬಲಿ ಪಡೆದಿದೆ ಎಂದು ವಿಪಕ್ಷಗಳು ಒತ್ತಾಯ ಮಾಡಿದರೂ ಈಗ ಕುನ್ಹಾ ವರದಿ ಆಧಾರದ ಮೇಲೆ ಮತ್ತೊಮ್ಮೆ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.