ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿ ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಉದಯಿಸಿದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹಾಗೂ ಆರ್ ಸಿಬಿ ಮೌಲ್ಯ ಗಗನಕ್ಕೇರಿದೆ.
ಗ್ಲೋಬಲ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಹೌಲಿಯಾನ್ ಲೋಕಿ ಸಂಸ್ಥೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಹಾಗೂ ಅದರ ಫ್ರಾಂಚೈಸಿಗಳ ಮೌಲ್ಯಮಾಪನ ಮಾಡಿ ವರದಿ ಪ್ರಕಟಿಸಿದೆ.
ಐಪಿಎಲ್ ಮೌಲ್ಯ 18ನೇ ಆವೃತ್ತಿ ಮುಕ್ತಾಯಗೊಂಡ ನಂತರ ಶೇ.13ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 3.9 ಶತಕೋಟಿ ಡಾಲರ್ ಗೆ ಜಿಗಿತ ಕಂಡಿದೆ.
ಮೈ11 ಸರ್ಕಲ್, ಆಂಜೆಲ್ ಒನ್, ರುಪೇ ಮತ್ತು ಸಿಇಎಟಿ ಮುಂದಾದ ಪ್ರಾಯೋಜಕ ಸಂಸ್ಥೆಗಳ ಮೌಲ್ಯ ಶೇ.25ರಷ್ಟು ಏರಿಕೆಯಾಗಿದೆ. 2028ರವರೆಗೆ ಐಪಿಎಲ್ ಪ್ರಾಯೋಜಕತ್ವ ಪಡೆದಿರುವ ಟಾಟಾ ಗ್ರೂಪ್ 2500 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದು ಇದರ ಮೌಲ್ಯ ಕೂಡ ಹೆಚ್ಚಾಗಿದೆ.
ಐಪಿಎಲ್ 2025ರ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೌಲ್ಯ 225 ದಶಲಕ್ಷ ಡಾಲರ್ ನಿಂದ 229 ದಶಲಕ್ಷ ಡಾಲರ್ ಗೆ ಏರಿಕೆಯಾಗಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಮೌಲ್ಯ ಹೊಂದಿರುವ ತಂಡವಾಗಿ ಹೊರಹೊಮ್ಮಿದೆ.
ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದು, ಇದರ ಮೌಲ್ಯ 204 ದಶಲಕ್ಷ ಡಾಲರ್ ನಿಂದ 242 ದಶಲಕ್ಷ ಡಾಲರ್ ಗೆ ಏರಿಕೆಯಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮೌಲ್ಯ 235 ದಶಲಕ್ಷ ಡಾಲರ್ ಆಗಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಫೈನಲ್ ತಲುಪಿದ್ದ ಪಂಜಾಬ್ ಕಿಂಗ್ಸ್ ಅತೀ ಹೆಚ್ಚು ಶೇ. 39.6ರಷ್ಟು ಮೌಲ್ಯ ಹೆಚ್ಚಿಸಿಕೊಂಡು 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಒಂದೇ ವರ್ಷದಲ್ಲಿ ಅತೀ ಹೆಚ್ಚು ಮೌಲ್ಯ ಹೆಚ್ಚಿಸಿಕೊಂಡ ಗೌರವಕ್ಕೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ.
ಐಪಿಎಲ್ ಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಿಂತ ಹೆಚ್ಚು ವೀಕ್ಷಕರನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. 2025ರ ಫೈನಲ್ ನಲ್ಲಿ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಿದ್ದು, 67.8 ದಶಲಕ್ಷ ಜನರು ಜಿಯೊ ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಿದ್ದಾರೆ.