ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆಯುವುದು ಅನುಮಾನವಾಗಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆಯಲಿರುವ ಪಂದ್ಯ ಉದ್ಘಾಟನಾ ಸಮಾರಂಭದ ನಂತರ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ದಿಶಾ ಪಟಾನಿ, ಶ್ರೇಯಾ ಘೋಷಲ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪ್ರದರ್ಶನ ನೀಡಲಿದ್ದಾರೆ.
ಆದರೆ ಹವಾಮಾನ ಇಲಾಖೆ ಪ್ರಕಾರ ಕೋಲ್ಕತಾದಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ ಉಂಟಾಗಿದ್ದು, ಪಂದ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕೇಂದ್ರ ಹವಾಮಾನ ಇಲಾಖೆ ಪ್ರಕಾರ ಗುರುವಾರಿಂದ ಭಾನುವಾರದವರೆಗೂ ದಕ್ಷಿಣ ಬೆಂಗಾಲ್ ನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಾರ್ಚ್ 22ರಂದು ಶನಿವಾರ ಆರೆಂಜ್ ಅಲರ್ಟ್ ಹಾಗೂ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕೋಲ್ಕತಾದಲ್ಲಿ ಶೇ.ಮಳೆಯಾಗುವ ಸಾಧ್ಯತೆ ಶೇ.79ರಷ್ಟು ಇದೆ. ಅಲ್ಲದೇ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಶೇ.97ರಷ್ಟಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಅರ್ಧಂಬರ್ಧ ನಡೆದರೆ ರನ್ ಸರಾಸರಿ ಹಾಗೂ ಡಕ್ ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ ತಂಡಗಳು ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ.