ಗುವಾಹತಿ: ಸಂಘಟಿತ ದಾಳಿ ಹಾಗೂ ಆರಂಭಿಕ ಕ್ವಿಂಟನ್ ಡಿ ಕಾಕ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಗುವಾಹತಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗೆ 151 ರನ್ ಗೆ ನಿಯಂತ್ರಿಸಿದ ಕೆಕೆಆರ್ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ರಾಜಸ್ಥಾನ್ ರಾಯಲ್ಸ್ ಗೆ ಇದು ಸತತ 2ನೇ ಸೋಲಾಗಿದೆ.
ಸುಲಭ ಗುರಿ ಬೆಂಬತ್ತಿದ ಕೆಕೆಆರ್ ತಂಡ ಮೊಯಿನ್ ಅಲಿಯನ್ನು (5) ಬೇಗನೇ ಕಳೆದುಕೊಂಡಿತು. ಆದರೆ ಫಾರ್ಮ್ ನಲ್ಲಿರುವ ಕ್ವಿಂಟನ್ ಡಿ ಕಾಕ್ 61 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 97 ರನ್ ಬಾರಿಸಿ ಔಟಾಗದೇ ಉಳಿಯುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪಿಚ್ ಅರಿತುಕೊಳ್ಳುವ ಮುನ್ನವೇ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ಇದರಿಂದ ಬೃಹತ್ ಮೊತ್ತ ಕಲೆಹಾಕುವ ಅವಕಾಶ ಕಳೆದುಕೊಂಡಿತು.
ಮಧ್ಯಮ ಕ್ರಮಾಂಕದಲ್ಲಿ ಧ್ರುವ ಜುರೆಲ್ (33), ಯಶಸ್ವಿ ಜೈಸ್ವಾಲ್ (29), ನಾಯಕ ರಿಯಾನ್ ಪರಾಗ್ (25) ಮಾತ್ರ ಹೋರಾಟ ನಡೆಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ, ಮೊಯಿನ್ ಅಲಿ, ಹರ್ಷಿತ್ ರಾಣಾ, ವೈಭವ್ ಅರೋರಾ ತಲಾ 2 ವಿಕೆಟ್ ಪಡೆದು ಮಿಂಚಿದರು.