ಅಹಮದಾಬಾದ್: ಬೌಂಡರಿ-ಸಿಕ್ಸರ್ ಗಳ ಮೇಲಾಟದಲ್ಲಿ ಹರಿದ ರನ್ ಹೊಳೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್ ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಸಂಪಾದಿಸಿತು. ಬೃಹತ್ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸುವ ಮೂಲಕ ವೀರೋಚಿತ ಸೋಲುಂಡಿತು
ಕಠಿಣ ಗುರಿ ಬೆಂಬತ್ತಿದ ಗುಜರಾತ್ ಗೆ ನಾಯಕ ಶುಭಮನ್ ಗಿಲ್ (33) ಮತ್ತು ಸಾಯಿ ಸುದರ್ಶನ್ 61 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ನಂತರ ಸಾಯಿ ಮತ್ತು ಜೋಸ್ ಬಟ್ಲರ್ 2ನೇ ವಿಕೆಟ್ ಗೆ 84 ರನ್ ಜೊತೆಯಾಟದಿಂದ ಗೆಲುವಿನ ಭರವಸೆ ಮೂಡಿಸಿದರು.
ಆದರೆ ಸಾಯಿ ಸುದರ್ಶನ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 74 ರನ್ ಬಾರಿಸಿ ಔಟಾದರೆ, ಬಟ್ಲರ್ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿದ್ದಾಗ ಔಟಾದರು. ಇವರಿಬ್ಬರ ನಂತರ ಸತತ ವಿಕೆಟ್ ಕಳೆದುಕೊಂಡು ರನ್ ಸರಾಸರಿ ಕಾಯ್ದುಕೊಳ್ಳುವಲ್ಲಿ ಗುಜರಾತ್ ವಿಫಲವಾಯಿತು. ರುದರ್ಫೋಡ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ ಸೋಲಿನ ಅಂತರ ತಗ್ಗಿಸಿದರು.
ಶ್ರೇಯಸ್ ಕೈ ತಪ್ಪಿದ ಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಶತಕ ವಂಚಿತ ನಾಯಕ ಶ್ರೇಯಸ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.
ಪ್ರಭಾಸಿಮ್ರನ್ ಸಿಂಗ್ (5) ವಿಕೆಟ್ ಕಳೆದುಕೊಂಡ ನಂತರ ಜೊತೆಯಾದ ಪ್ರಿಯಾಂಶ್ ಆರ್ಯಾ (45) ಮತ್ತು ಶ್ರೇಯಸ್ ಅಯ್ಯರ್ 51 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ನಂತರ ಒಂದರ ಹಿಂದೆ ಒಂದರಂತೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿಯಾಗಿ ತಂಡವನ್ನು ಬೃಹತ್ ಮೊತ್ತದತ್ತ ಅಯ್ಯರ್ ಮುನ್ನಡೆಸಿದರು.
ಅಯ್ಯರ್ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ಒಳಗೊಂಡ 97 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಲ್ಲದೇ ಮುರಿಯದ 6ನೇ ವಿಕೆಟ್ ಗೆ ಶಶಾಂಕ್ ಸಿಂಗ್ ಜೊತೆ 5 ಓವರ್ ಗಳಲ್ಲಿ 82 ರನ್ ಜೊತೆಯಾಟ ನಿಭಾಯಿಸಿದರು. ಶಶಾಂಕ್ 16 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 44 ರನ್ ಚಚ್ಚಿದರು. ಗುಜರಾತ್ ಟೈಟಾನ್ಸ್ ಪರ ಸಾಯಿ ಕೃಷ್ಣನ್ 3 ವಿಕೆಟ್ ಪಡೆದು ಪ್ರಭಾವಿ ಎನಿಸಿದರು.