ಚೆನ್ನೈ: ರೋಚಕ ಗೆಲುವಿನೊಂದಿಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿವೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಗೆದ್ದು ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ಬರೆಯಲು ಹಾತೊರೆಯುತ್ತಿದ್ದರೆ, ಚೆನ್ನೈನಲ್ಲಿ ಸೋಲಿನ ದಾಖಲೆ ಮುರಿದು ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿ ಆರ್ ಸಿಬಿ ಇದೆ. ಹಾಟ್ ಫೇವರಿಟ್ ಆಗಿರುವ ಚೆನ್ನೈ ಸೋಲಿಸಿದರೆ ಆರ್ ಸಿಬಿ ತವರಿನಲ್ಲಿ ಮುಂದಿನ ತವರಿನ ಮೊದಲ ಪಂದ್ಯಕ್ಕೆ ಪೂರ್ಣ ವಿಶ್ವಾಸ ಗಿಟ್ಟಿಸಲಿದೆ. ಯುಗಾದಿ ಹಬ್ಬಕ್ಕೂ ಮುನ್ನವೇ ಯಾರಿಗೆ ಗೆಲುವಿನ ಬೆಲ್ಲ? ಯಾರಿಗೆ ಸೋಲಿನ ಬೇವು ಎಂಬುದು ಕುತೂಹಲದ ವಿಷಯವಾಗಿದೆ.
ಸ್ಪಿನ್ನರ್ ಗಳಿಗೆ ಹೇಳಿ ಮಾಡಿಸಿದ ಪಿಚ್ ಅರೆದು ಕುಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿರುವ ದಾಖಲೆ ಹೊಂದಿದೆ. ಆರ್ ಸಿಬಿ ಮತ್ತು ಸಿಎಸ್ ಕೆ 33 ಬಾರಿ ಮುಖಾಮುಖಿ ಆಗಿದ್ದು, ಸಿಎಸ್ ಕೆ 22 ಬಾರಿ ಗೆಲುವು ದಾಖಲಿಸಿದ್ದರೆ, ಆರ್ ಸಿಬಿ ಕೇವಲ 11ರಲ್ಲಿ ಜಯ ಸಾಧಿಸಿದೆ.
ಚೆನ್ನೈ ತಂಡದಲ್ಲಿ ಆರ್ ಅಶ್ವಿನ್ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದರೆ, ಜಡೇಜಾ ಮತ್ತು ನೂರ್ 12 ಓವರ್ ಗಳನ್ನು ಹಂಚಿಕೊಳ್ಳಲಿದ್ದು, ಆರ್ ಸಿಬಿ ಬ್ಯಾಟ್ಸ್ ಮನ್ ಗಳಿಗೆ ದೊಡ್ಡ ಸವಾಲೊಡ್ಡಲಿದ್ದಾರೆ. ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಉತ್ತಮ ಬ್ಯಾಟಿಂಗ್ ಬಲ ಹೊಂದಿದೆ. ಆದರೆ ಆರ್ ಸಿಬಿ ಸಂಪೂರ್ಣ ಹೊಸ ರೂಪ ಪಡೆದಿದೆ. ಇಡೀ ತಂಡಕ್ಕೆ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ.
ಮೊದಲ ಪಂದ್ಯದಲ್ಲೇ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದರೆ, ನಾಯಕ ರಜತ್ ಪಟಿದಾರ್ ಕೂಡ ತಕ್ಕಮಟ್ಟಿಗೆ ಪ್ರದರ್ಶನ ನೀಡಿದ್ದಾರೆ. ದೇವದತ್ ಪಡಿಕಲ್ ಮುಂತಾದ ಬ್ಯಾಟ್ಸ್ ಮನ್ ಗಳು ಇನ್ನಷ್ಟೇ ಲಯ ಕಂಡುಕೊಳ್ಳಬೇಕಾಗಿದೆ. ಜೋಶ್ ಹಾಜೆಲ್ ವುಡ್ 16 ಡಾಟ್ ಬಾಲ್ ಹಾಕಿ ಗಮನ ಸೆಳೆದಿದ್ದಾರೆ.