ಮೊಹಲಿ: ಅಮೋಘ ಪ್ರದರ್ಶನ್ ನೀಡಿದ ಪಂಜಾಬ್ ಬೌಲರ್ ಗಳು 16 ರನ್ ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತ ದಾಖಲಿಸಿದ ದಾಖಲೆ ಬರೆಯಿತು.
ಮೊಹಾಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 15.1 ಓವರ್ ಗಳಲ್ಲಿ 111 ರನ್ ಗೆ ಪತನಗೊಂಡಿತು. ಸುಲಭ ಗುರಿ ಬೆಂಬತ್ತಿದ ಕೆಕೆಆರ್ 15.1 ಓವರ್ ಗಳಲ್ಲಿ 95 ರನ್ ಗೆ ಪತನಗೊಂಡಿತು.
ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಮಾರಕ ದಾಳಿಗೆ ಉಳಿದ ಬೌಲರ್ ಗಳು ಸಾಥ್ ನೀಡಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್ ತಂಡ ತರಗಲೆಯಂತೆ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಈ ಸೋಲಿನಿಂದ ಅಗ್ರಸ್ಥಾನಕ್ಕೇರುವ ಕನಸಿನಲ್ಲಿದ್ದ ಕೆಕೆಆರ್ ಗೆ ಆಘಾತವಾಯಿತು.
ಯಜುರ್ವೆಂದ್ರ ಚಾಹಲ್ 28 ರನ್ ಗೆ 4 ವಿಕೆಟ್ ಪಡೆದು ಮಿಂಚಿದರೆ, ಮಾರ್ಕೊ ಜಾನ್ಸನ್ 3.1 ಓವರ್ ಗಳಲ್ಲಿ 17 ರನ್ ಗೆ 3 ವಿಕೆಟ್ ಕಬಳಿಸಿದರು. ಕ್ಸೇವಿಯರ್, ಮ್ಯಾಕ್ಸ್ ವೆಲ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
ಕೆಕೆಆರ್ ತಂಡ ಪರ ರಘುವಂಶಿ 37 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ರನ್ ಬಾರಿಸಿದರೆ, ನಾಯಕ ರಹಾನೆ (17) ಮತ್ತು ಆಂಡ್ರೆ ರಸೆಲ್ (17) ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ಎರಡಂಕಿಯ ಮೊತ್ತ ದಾಟುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು.
ಕುಸಿದ ಪಂಜಾಬ್
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಕೂಡ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿ ದೊಡ್ಡ ಮೊತ್ತ ಪೇರಿಸಲು ವಿಫಲವಾಯಿತು.
ಪಿಯುಂಶ್ ಆರ್ಯ ಮತ್ತು ಪ್ರಭುಸಿಮ್ರಾನ್ ಸಿಂಗ್ ಮೊದಲ ವಿಕೆಟ್ ಗೆ 39 ರನ್ ಪೇರಿಸಿದರು. ಪ್ರಭುಸಿಮ್ರಾನ್ ಸಿಂಗ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 30 ರನ್ ಸಿಡಿಸಿ ವೈಯಕ್ತಿಕ ಗರಿಷ್ಠ ಸಾಧಿಸಿದರು. ಪಿಯೂಶ್ ಆರ್ಯ (22), ನೆಹಲ್ ವಧೇರ (10), ಶಶಾಂಕ್ ಸಿಂಗ್ (18) ತಕ್ಕಮಟ್ಟಿಗೆ ಹೋರಾಟ ನಡೆಸಿದರು.