ಕೋಗಿಲು ಕ್ರಾಸ್‌ನ ಡಂಪ್ ಸೈಟ್‌ನಲ್ಲಿ ಇಷ್ಟೊಂದು ಜನ ಬಂದು ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ವಾಸಿಸಿದ್ದು ಹೇಗೆ ಎಂಬುದು ಮೊದಲು ತನಿಖೆಯಾಗಬೇಕು ಎಂದು ಶಾಸಕ ಸುರೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೋಗಿಲು ಲೇಔಟ್ ಅಕ್ರಮ ಮನೆ ಸಕ್ರಮ ಮಾಡಿದ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹೈಮಾಂಡ್‌ನ ಕೆಸಿ ವೇಣುಗೋಪಾಲ್ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ವಿಧಾನಸೌಧದಲ್ಲಿ ಅವರು ಹೀಗೆ ಪ್ರತಿಕ್ರಿಯೆ ನೀಡಿದರು. ವೇಣುಗೋಪಾಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್ ಕುಮಾರ್, ಕೋಗಿಲು ಪ್ರಕರಣ ಕೇರಳ ಚುನಾವಣೆ ಅನುಕಂಪದ ಆಧಾರಿತ ಕ್ರಮ. ಕೇರಳದಲ್ಲಿ ಚುನಾವಣೆಯಲ್ಲಿ ಮಹತ್ವ ಸಿಗಬೇಕೆಂದು ಕೇರಳ ಸಿಎಂ ಜೊತೆಗೆ ವೇಣುಗೋಪಾಲ್ ಮಾತನಾಡು ತ್ತಿದ್ದಾರೆ. ಇದು ಕಾಂಪಿಟೇಟಿವ್ ಪಾಲಿಟಿಕ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮನೆ ಎಂದು ಸರ್ಕಾರವೇ ಹೇಳುತ್ತಿದೆ, 15-20 ವರ್ಷಗಳಿಂದ ಇದ್ದಾರೆ ಅನ್ನುತ್ತಾರೆ, ಮನೆ ಕೊಡುತ್ತೇವೆ ಅಂದಿದ್ದಾರೆ. ಕಾಂಗ್ರೆಸ್ ನಾಯಕತ್ವವನ್ನು ಓಲೈಸಲು ರಾಜ್ಯ ಸರ್ಕಾರ ಈ ನೀತಿ ಅನುಸರಿಸುತ್ತದೆ. ಸರ್ಕಾರದ ನಡೆಯಿಂದ ಕರ್ನಾಟಕದ ನಿಜವಾದ ಸಂತ್ರಸ್ತರಿಗೆ ಅನ್ಯಾಯ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವೋಟ್ ಬ್ಯಾಂಕ್ ರಾಜಕಾರಣಕೋಸ್ಕರ, ಕೇರಳ ಚುನಾವಣೆಗೆ ಅನುಕೂಲ ಆಗಲಿ ಎಂದು ಮಾಡುತ್ತಿದ್ದಾರೆ. ಇದು ನ್ಯಾಯಯುತ ಅಲ್ಲ. ಒಂದು ಅಕ್ರಮವನ್ನು ಸಕ್ರಮ ಮಾಡುವುದು ಸರ್ಕಾರದ ಅಕ್ರಮ ನೀತಿ ಎಂದು ಟೀಕಿಸಿದರು.
ಸಂತ್ರಸ್ತ ಮನೆಗಳ ಸಂಖ್ಯೆ 300 ಆಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವರು ಹೇಗೆ ಬಂದು ಅಲ್ಲಿಗೆ ಸೇರಿಕೊಂಡರು, ಯಾರ ಕುಮ್ಮಕ್ಕಿನಿಂದ ಅಲ್ಲಿ ಗುಡಿಸಲು ಬಂತು, ಈ ಬಗ್ಗೆ ತನಿಖೆ ಆಗಬೇಕು. ಅದು ಬಿಟ್ಟು ಬಂದವರಿಗೆಲ್ಲ ಮನೆ ಕೊಟ್ಟರೆ ರಾಜ್ಯದ ಜನ, ಸರ್ಕಾರ ದಂಡ ತೆರಬೇಕಾಗುತ್ತದೆ ಎಂದು ಕಿಡಿ ಕಾರಿದರು.


