ನ್ಯಾಯ ದೇಗುಲದಲ್ಲಿ ಕುಳಿತು ನ್ಯಾಯದಾನ ಮಾಡಬೇಕಿರುವ ನ್ಯಾಯಮೂರ್ತಿ ಒಬ್ಬರು ಗುರುತರ ಆರೋಪಕ್ಕೆ ಒಳಗಾದಾಗ ಇವರ ವಿರುದ್ಧ ನಡೆಯುವ ತನಿಖೆ ಅಥವಾ ವಿಚಾರಣೆಯಂತೂ ಸಾಮಾನ್ಯ ನ್ಯಾಯ ದಂಡ ಪ್ರಕ್ರಿಯೆಯ ಪರಿಧಿಗೆ ಒಳಪಡುವುದಿಲ್ಲ.
ಗುರುತರ ಆರೋಪ ಹೊತ್ತ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವ ವಿಚಾರವೀಗ ನ್ಯಾಯಮೂರ್ತಿಗಳಮಟ್ಟದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ . ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸೇವಾವಧಿ ಪೂರ್ಣಗೊಂಡು ನಿವೃತ್ತಿಯಾಗುವವರೆಗೂ ಇವರ ಮೇಲೆ ಯಾವುದೇ ಕ್ರಿಮಿನಲ್ ವಿಚಾರಣೆ ಬೇಡ ಎಂಬ ಸುಪ್ರೀಂಕೋರ್ಟ್ ಹಿಂದಿನ ಆದೇಶಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳ ವೃಂದದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಈ ದಿಶೆಯಲ್ಲಿ ಕಳಂಕ ಹೊತ್ತ ವರ್ಮಾ ಅವರ ವಿರುದ್ದ ಅವರು ಸೇವೆಯಿಂದ ನಿವೃತ್ತಿಯಾಗುವ ಮುನ್ನವೇ ಕ್ರಿಮಿನಲ್ ವಿಚಾರಣೆ ನಡೆಸಬೇಕು ಮತ್ತು ಈ ಪ್ರಕರಣದ ಮುಂದಿನ ವಿಚಾರಣೆಯನು ಹದಿಮೂರು ಮಂದಿ ನ್ಯಾಯಮೂರ್ತಿಗಳಿರುವ ನ್ಯಾಯಪೀಠವನ್ನು ರಚಿಸಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ದೇಶದ ವಿವಿಧ ಹೈಕೋರ್ಟ್‌ಗಳ ಐವತ್ತಕ್ಕೂ ಅಧಿಕ ಮಂದಿ ಹಾಲಿ ನ್ಯಾಯಮೂರ್ತಿಗಳು ಸಹಿ ಮಾಡಿರುವ ಇಂತಹ ಮನವಿ ಪತ್ರವೊಂದು ಈಗ ಸಿಜೆಐ ಕೈ ಸೇರಿರುವುದು ಗಮನಾರ್ಹ. ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಓರ್ವ ಹೈಕೋರ್ಟ್ ನ್ಯಾಯಮೂರ್ತಿ ಅವರ ಮೇಲೆ ಕ್ರಮ ಗುರುತರ ಆರೋಪಗಳು ಕೇಳಿ ಬಂದಾಗ, ಯಾವ ಬಗೆಯ ಕ್ರಮ ಕೈಗೊಳ್ಳಬೇಕೆಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ಏಕೆಂದರೆ ಇಂತಹ ಸನ್ನಿವೇಶ ಸೃಷ್ಟಿಯಾದಾಗ ಜನತೆಯ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಕೂಡಾ ಅತಿಮುಖ್ಯ. ನ್ಯಾಯ ದೇಗುಲದಲ್ಲಿ ಕುಳಿತು ನ್ಯಾಯದಾನ ಮಾಡಬೇಕಿರುವ ನ್ಯಾಯಮೂರ್ತಿ ಒಬ್ಬರು ಕಳಂಕ ಹೊತ್ತಾಗ ಅವರ ಮೇಲೆ ನಡೆಸಲಾಗುವಂತಹ ತನಿಖೆ ಮತ್ತು ವಿಚಾರಣೆಗಳು ಸಾಮಾನ್ಯ ನ್ಯಾಯ ದಂಡ ಪ್ರಕ್ರಿಯೆಯ ಸಂಪೂರ್ಣ ಪರಿಧಿಗೆ ಒಳಗಾಗಿಲ್ಲ. ಇದೆಲ್ಲವೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಆಗುವಂತಹದು. ತಮ್ಮ ವಿರುದ್ದ ಇದುವರೆಗೆ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡ ಎಲ್ಲ ಬಗೆಯ ತನಿಖೆಯನ್ನು ನ್ಯಾಯಮೂರ್ತಿ ವರ್ಮಾ ಪ್ರಶ್ನಿಸಿದ್ದಾರೆ.
ತಮ್ಮ ಮೇಲಿನ ವಿಚಾರಣೆಯ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಡೆಯಬೇಕೆಂದು ( ಇನ್ ಕೆಮರಾ) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಈಗ ತಳ್ಳಿಹಾಕಿದೆ. ಇದರ ನಡುವೆ ಹೈಕೋರ್ಟ್ ನ್ಯಾಯಮೂರ್ತಿಗಳ ವೃಂದ ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ಫುಲ್‌ಕೋರ್ಟ್ ಇದನ್ನು ತೀರ್ಮಾನಿಸಬೇಕಷ್ಟೆ. ವರ್ಮಾ ವಿಚಾರದಲ್ಲಿ ಇದುವರೆಗೆ ನಡೆದ ಎಲ್ಲ ಕಾನೂನು ಪ್ರಕಿಯೆ ಸಿಜೆಐ ಆದೇಶದ ಪ್ರಕಾರ ನಡೆದಿರುವಂತಹದು. ಐದು ತಿಂಗಳ ಹಿಂದೆ ನ್ಯಾ. ವರ್ಮಾ ಅವರ ನಿವಾಸದಲ್ಲಿ ಕರೆನ್ಸಿ ನೋಟಿನ ಕಂತೆಗಳು ಕಂಡು ಬಂದಾಗ ಇದು ದೇಶದ ಎಲ್ಲ ಕಡೆ ಸುದ್ದಿಯಾಯಿತು. ಈ ನಡುವೆ ಇವರನ್ನು ಬೇರೆಡೆ ವರ್ಗಾವಣೆ ಮಾಡಿದಾಗ ಇದಕ್ಕೆ ಕೂಡಾ ಕೆಲವು ಹೈಕೋರ್ಟ್ ನ್ಯಾಯಮೂರ್ತಿಗಳ ಬಣದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಂತೂ ಇದನ್ನು ಬಹಿರಂಗವಾಗಿಯೇ ಟೀಕೆ ಮಾಡಿದ್ದು ಗಮನಾರ್ಹ. ಅಲ್ಲದೆ ಇವರಿಗೆ ವಾಗ್ದಂಡನೆ ವಿಧಿಸಬೇಕೆಂಬ ವಿಪಕ್ಷಗಳು ಮಂಡಿಸಿದ ಗೊತ್ತುವಳಿಯೀಗ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆದಿದೆ. ಒಟ್ಟಿನಲ್ಲಿ ಸಂವಿಧಾನದ ರಕ್ಷಣಾ ಕವಚ ಹೊಂದಿರುವ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ತಮ್ಮ ಮೇಲೆ ಆರೋಪ ಕೇಳಿ ಬಂದಾಗ ಇವರಿಗೆ ಅನ್ವಯಿಸಬೇಕಾದ ನಿಷ್ಠುರ ಹಾಗೂ ನಿರ್ಭೀತ ಕಾಯಿದೆ ಕಟ್ಟಳೆ ಏನೆಂಬುದನ್ನು ಉನ್ನತ ನ್ಯಾಯಾಂಗವೇ ತೀರ್ಮಾನಿಸಬೇಕಿದೆ.