ದಾವಣಗೆರೆ; ರೈತರ ಶ್ರಮಕ್ಕೆ ಸರಿಯಾದ ಮೌಲ್ಯ ಸಿಗಬೇಕು ಹಾಗೂ ಆದಾಯ ದ್ವಿಗುಣಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಕೃಷಿ ಇಲಾಖೆಯ ನೇತೃತ್ವದಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ಮೇಳ–2026 (ITF–2026) ಅನ್ನು ಫೆಬ್ರವರಿ 6, 7 ಮತ್ತು 8ರಂದು ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ ದಾವಣಗೆರೆ ಕ್ಷೇತ್ರದ ರೈತರು ಭಾಗವಹಿಸಬೇಕೆಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ.
ಈ ಮೇಳದ ಥೀಮ್ ‘ಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣ’ ಆಗಿದ್ದು, ಕೃಷಿ ವಲಯದಲ್ಲಿ ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕ ಮತ್ತು ಉದ್ಯಮಶೀಲತೆಗೆ ಒತ್ತು ನೀಡಲಿದೆ.
ಸಾವಯವ ಕೃಷಿ, ಸಮಗ್ರ ಕೃಷಿ, ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು, ಆಧುನಿಕ ಸಂಸ್ಕರಣಾ ತಂತ್ರಜ್ಞಾನ, ಬ್ರಾಂಡಿಂಗ್ ಹಾಗೂ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪರ್ಕಗಳ ಕುರಿತು ಸಮಗ್ರ ಪ್ರದರ್ಶನ ಹಾಗೂ ಮಾಹಿತಿ ಮೇಳದಲ್ಲಿ ಲಭ್ಯವಾಗಲಿದೆ.
ರಾಜ್ಯದ ಪ್ರಮುಖ ರೈತ ಉತ್ಪಾದಕ ಸಂಘಟನೆಗಳು , ರೈತ ಸಮೂಹಗಳು ಹಾಗೂ ಕೃಷಿ ಆಧಾರಿತ ಸ್ಟಾರ್ಟ್‌ಅಪ್‌ಗಳು ತಮ್ಮ ನವೀನ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಅಂತರರಾಷ್ಟ್ರೀಯ ಖರೀದಿದಾರರು, ಉದ್ಯಮಿಗಳು ಮತ್ತು ಕೃಷಿ ತಜ್ಞರು ಭಾಗವಹಿಸುವುದರಿಂದ ರೈತರಿಗೆ ನೇರ ವ್ಯಾಪಾರ ಸಂಪರ್ಕಗಳ ಅಪರೂಪದ ಅವಕಾಶ ದೊರೆಯಲಿದೆ.
ಈ ಮೇಳವು ರೈತರನ್ನು ಕೇವಲ ಉತ್ಪಾದಕರಾಗಿರದೆ ಉದ್ಯಮಿಗಳಾಗಿ ರೂಪಿಸುವ, ಕೃಷಿ ಆಧಾರಿತ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ರಾಜ್ಯದ ಕೃಷಿ ಆರ್ಥಿಕತೆಯನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ರೈತರು, ಕೃಷಿ ವಿದ್ಯಾರ್ಥಿಗಳು, ತಜ್ಞರು ಮತ್ತು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.


