ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಕ್ರಮವಾಗಿ 6%, 6% ಮತ್ತು 5% ಒಳಮೀಸಲಾತಿ ನೀಡಲು ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಎಸ್ ಸಿ ಸಮುದಾಯವನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿತ್ತು. ಗುಂಪು 1 ಅತೀ ಹಿಂದುಳಿದ ಜಾತಿಗಳು ಶೇ.1, ಗುಂಪು 2 ಎಡಗೈ ಜಾತಿಗಳು ಶೇ 6, ಗುಂಪು 3 ಬಲಗೈ ಜಾತಿಗಳು ಶೇ.5, ಗುಂಪು 4 ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) ಶೇ.4, ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಶೇ.1 ಎಂದು ವರ್ಗೀಕರಣ ಮಾಡಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಡ, ಬಲ ಹಾಗೂ ಇತರೆ ಎಂದು ಮೂರು ವಿಂಗಡನೆ ಮಾಡಿ ಮರುವರ್ಗೀಕರಿಸಿ ಒಳಮೀಸಲಾತಿ ಮರುಹಂಚಿಕೆಗೆ ತೀರ್ಮಾನಿಸಲಾಗಿದೆ.
ಪರಿಶಿಷ್ಟ ಜಾತಿ ಸಮುದಾಯದ ಎಡಗೈ ಗುಂಪಿಗೆ 6%,, ಬಲ ಗೈ ಗುಂಪಿಗೆ 6% ಮತ್ತು ಇತರೆ (ಸ್ಪರ್ಶಿಯರು, ಅಲೆಮಾರಿ ಗುಂಪು)ಗೆ 5% ಒಳಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಹೊಸ ವರ್ಗೀಕರಣದಂತೆ ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದ್ದ ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಯನ್ನು ಬಲಗೈ ಗುಂಪಿಗೆ ಸೇರಿಸಲಾಗಿದೆ. ಆ ಮೂಲಕ ಬಲ ಗೈ ಗುಂಪಿಗೆ ಇದ್ದ 5% ಒಳ ಮೀಸಲಾತಿಯನ್ನು 6%ಕ್ಕೆ ಏರಿಕೆ ಮಾಡಲಾಗಿದೆ.
ಗುಂಪು 4 ಬಂಜಾರ, ಬೋವಿ, ಲಂಬಾಣಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) (ಶೇ.4)ನ್ನು ಇತರೆ ಗುಂಪು ಎಂದು ವರ್ಗೀಕರಿಸಿ 5% ಒಳ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ಇತರೆ ಗುಂಪಿಗೆ ಅತಿ ಹಿಂದುಳಿದ ಜಾತಿ, ಅಲೆಮಾರಿ ಸಮುದಾಯವನ್ನು ಸೇರಿಸಲಾಗಿದೆ. ಆ ಮೂಲಕ ಪರಿಶಿಷ್ಟ ಜಾತಿ ಸನುದಾಯಗಳ ದಶಕಗಳ ಒಳಮೀಸಲಾತಿ ಕಾಯುವಿಕೆಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಯತ್ನಿಸಿದೆ.
ನ್ಯಾ.ನಾಗಮೋಹನ್ ದಾಸ್ ನೀಡಿದ ವರದಿ ಪ್ರಕಾರ 101 ಪ.ಜಾತಿಗಳ ಕ್ರೋಢೀಕೃತ ವಿವರದಂತೆ
ಪ್ರವರ್ಗ- Aಯಲ್ಲಿ 59 ಉಪ ಜಾತಿಗಳಿದ್ದು, 5,22,099 ಒಟ್ಟು ಜನಸಂಖ್ಯೆ ಹೊಂದಿದೆ.
ಪ್ರವರ್ಗ- B (ಎಡಗೈ) 18 ಉಪಜಾತಿಗಳಿದ್ದು, ಒಟ್ಟು 36,69,246 ಜನಸಂಖ್ಯೆ ಹೊಂದಿದೆ.
ಪ್ರವರ್ಗ- C (ಬಲಗೈ) 17 ಉಪಜಾತಿಗಳಿದ್ದು, ಒಟ್ಟು ಜನಸಂಖ್ಯೆ 30,08,633 ಇದೆ. ಪ್ರವರ್ಗ- Dಯಲ್ಲಿ 4 ಉಪಜಾತಿಗಳಿದ್ದು, 28,34,939 ಜನಸಂಖ್ಯೆ ಹೊಂದಿದೆ.
ಪ್ರವರ್ಗ- E (ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ) 3 ಉಪಜಾತಿಗಳಿದ್ದು, 4,74,954 ಜನಸಂಖ್ಯೆ ಹೊಂದಿದೆ.