ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ಅವಮಾನಕ್ಕೊಳಗಾದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಅವರನ್ನು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಬಡ್ತಿ ನೀಡಿದ್ದಾರೆ. ಬೆಳಗಾವಿ ಡಿಸಿಪಿ ಆಗಿ ನೇಮಕ ಮಾಡಿ ಸರ್ಕಾರದ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಧನಂಜಯ್ ಆದೇಶ ಹೊರಡಿಸಿದ್ದಾರೆ.
ಕಳೆದ ಏಪ್ರಿಲ್ 28 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಹೋಗಿದ್ದರು. ಆ ಘಟನೆಯಿಂದ ಮನನೊಂದು ಇತ್ತೀಚೆಗಷ್ಟೇ ಎಎಸ್‌ಸಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಭರಮನಿ ರಾಜೀನಾಮೆ ವಿಚಾರ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈಗ ಡಿಸಿಪಿ ಹುದ್ದೆ ನೀಡುವ ಮೂಲಕ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ.
ನಾರಾಯಣ ಭರಮನಿಗೆ ಸ್ವತಃ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಫೋನ್ ಮಾಡಿ ಮನವೊಲಿಸಿದ್ದರು. ಇದೀಗ ಎಎಸ್‌ಪಿ ಹುದ್ದೆಯಿಂದ ಡಿಸಿಪಿ ಹುದ್ದೆಗೆ ಬಡ್ತಿ ನೀಡುವ ಮೂಲಕ ಭರಮನಿ ಅವರನ್ನು ಸಮಾಧಾನಪಡಿಸಲಾಗಿದೆ. ಸಿಎಂ ಮನವರಿಕೆ: ಭರಮನಿ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಿದ ಸಿಎಂ, “ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶ ಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ” ಎಂದು ಮನವರಿಕೆ ಮಾಡಿದ್ದರು.