ಮತ ಕಳ್ಳತನ ಆರೋಪಗಳ ಕುರಿತು ಚುನಾವಣಾ ಆಯೋಗವು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ‘ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿ’ಯಾಗಿ ಕಿರುಚಾಡುವ ಬದಲು ತನಿಖೆಗೆ ಆದೇಶಿಸಬೇಕಾಗಿತ್ತು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖುರೇಶಿ, ರಾಹುಲ್ ಗಾಂಧಿ ಗಂಭೀರ ಆರೋಪಗಳನ್ನು ಮಾಡಬೇಕಾದರೆ ವಿವರವಾದ ತನಿಖೆ ಮಾಡಬೇಕಿದೆ ಎಂದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ನಡೆಸಿದ ವಿಧಾನದ ಬಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದರು.
‘ಚುನಾವಣಾ ಆಯೋಗದ ಬಗ್ಗೆ ಯಾವುದೇ ಟೀಕೆ ಕೇಳಿಬಂದಾಗ ನನಗೆ ತುಂಬಾ ನೋವುಂಟಾಗುತ್ತದೆ. ಆ ಸಂಸ್ಥೆಯ ಮೇಲೆ ದಾಳಿ ನಡೆದಾಗ ಅಥವಾ ಯಾವುದೇ ರೀತಿಯಲ್ಲಿ ದುರ್ಬಲಗೊಂಡಾಗ ನನಗೆ ಕಳವಳವಾಗುತ್ತದೆ ಮತ್ತು ಚುನಾವಣಾ ಆಯೋಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನಾನು ಸಿಇಸಿ ಆಗಿದ್ದಾಗ ನನ್ನ ಸಿಬ್ಬಂದಿಗೆ ಸಾಮಾನ್ಯವಾಗಿ ನೀಡುತ್ತಿದ್ದ ಸೂಚನೆಯೆಂದರೆ, ವಿರೋಧ ಪಕ್ಷ ಅಪಾಯಿಂಟ್ಮೆಂಟ್ ಬಯಸಿದರೆ ತಕ್ಷಣ ನೀಡಿ, ಅವರ ಮಾತನ್ನು ಆಲಿಸಿ, ಅವರೊಂದಿಗೆ ಮಾತನಾಡಿ, ಅವರಿಗೆ ಏನಾದರೂ ಸಣ್ಣ ಉಪಕಾರ ಬೇಕಾದರೆ ಬೇರೆಯವರಿಗೆ ಹಾನಿಯಾಗದಿದ್ದರೆ ಅದನ್ನು ಮಾಡಿ ಎಂಬುದಾಗಿತ್ತು ಎಂದು ಹೇಳಿದರು.
ಈಗ ವಿರೋಧ ಪಕ್ಷಗಳು ಆಗಾಗ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ. 23 ಪಕ್ಷಗಳು ತಮಗೆ ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ, ಯಾರೂ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಹೇಳಬೇಕಾಗಿ ಬಂದಿದೆ ಎಂದಿದ್ದಾರೆ.
ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆರೋಪಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಳುವ ಬದಲು ತನಿಖೆಗೆ ಆದೇಶಿಸಬೇಕಿತ್ತು ಎಂದರು.