ಇನ್ಸ್ಟಾಗ್ರಾಂ ಮೂಲಕ ಆದ ಪರಿಚಯ ಸ್ನೇಹದಿಂದ ಪ್ರೀತಿಯಾಗಿ ದೈಹಿಕ ಸಂಬಂಧಕ್ಕೆ ಮುಂದುವರಿದ ಬಳಿಕ ವಂಚನೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ಸೇತುವೆ ಬಳಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಕರನ ಮೋಸಕ್ಕೆ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದು ಮಹಿಳೆ ತುಂಗಭದ್ರಾ ನದಿಗೆ ಜಿಗಿದಿದ್ದಾರೆ.
ಸೇತುವೆಯಿಂದ ಜಿಗಿಯುತ್ತಿರುವುದನ್ನು ಬೈಕ್ ಸವಾರರು ನೋಡಿ ಮದಲಗಟ್ಟಿ ಗ್ರಾಮಸ್ಥರಿಗೆ ತಿಳಿಸಿದ್ದರು. ಅಕ್ಕಪಕ್ಕದಲ್ಲಿದ್ದ ಮೀನುಗಾರರು ಮಹಿಳೆಯನ್ನು ರಕ್ಷಿಸಿಲು ಪ್ರಯತ್ನಿಸಿದರೂ ನೀರಿನ ರಭಸಕ್ಕೆ ಆಕೆ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆಯೊಬ್ಬರು ನನ್ನ ಸಾವಿಗೆ ನನ್ನ ಪ್ರಿಯತಮ ಸುಗೂರು ಶಿವಮೂರ್ತಿನೇ ಕಾರಣ, ಈತನಿಗೆ ಮರಣದಂಡನೆ ಶಿಕ್ಷೆ ಆಗಬೇಕು. ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನ ಪ್ರೀತಿ ಮಾಡುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನ ಬಿಟ್ಟಿದ್ದಾನೆ ಎಂದು ಬರೆದುಕೊಂಡಿದ್ದಾರೆ.