ವರ್ಗಾವಣೆ ಆಗ್ತಿದೆ, ಅದಕ್ಕಾಗಿ ಗೃಹಸಚಿವರಿಗೆ ಒಂದು ಕೋಟಿ ರೂ. ಲಂಚ ಕೊಡಬೇಕು ಎಂದು ಇನ್ಸ್‌ಪೆಕ್ಟರ್‌ವೊಬ್ಬರು ಗಾಂಜಾ ಪೆಡ್ಲರ್‌ಗಳಿಂದ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಅಮೃತಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಅಂಬರೀಷ್ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದೆ.
ಹಣಕ್ಕಾಗಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಮಾಡಿಸುತ್ತಿದ್ದಾರೆ, ತಾನು ಭೈರತಿ ಬಸವರಾಜು ಅವರ ಸಂಬಂಧಿ ಎಂದು ಬೆದರಿಕೆ ಹಾಕ್ತಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಮಾಜ ಸೇವಕರೊಬ್ಬರು ಡಿಜಿಗೆ ಪತ್ರ ಬರೆದಿದ್ದಾರೆ.
ಪ್ರಕರಣವೊಂದರಲ್ಲಿ 25 ಲಕ್ಷ ಪಡೆದು ಆರೋಪಿಯನ್ನು ಇನ್ಸ್‌ಪೆಕ್ಟರ್ ಬಿಡುಗಡೆ ಮಾಡಿದ್ದಾರೆ, ಎರಡು ವರ್ಷಗಳಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆಂದು ದೂರಲಾಗಿದೆ. ಕೃಷ್ಣ ಬೈರೇಗೌಡ ತನ್ನ ಸಂಬಂಧಿ, ಅವರ ಸಹೋದರ ಚೌಡೇಗೌಡರ ಬ್ಲಾಕ್ ಮನಿ ತನ್ನ ಬಳಿ ಇದೆ ಎಂದು ಇನ್ಸ್‌ಪೆಕ್ಟರ್ ಹೇಳಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಆನೇಕಲ್ ಸುತ್ತಮುತ್ತ ಬ್ಯಾಟರಿ ಕಳ್ಳರ ಹಾವಳಿ
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಂಡ್ಲವಾಡಿಯ ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಬ್ಯಾಟರಿಗಳ ಕಳವು ಹಾವಳಿ ಹೆಚ್ಚುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.
ಕಳೆದೊಂದು ವಾರದಿಂದ ರಾತ್ರಿಯಾದರೆ ಬ್ಯಾಟರಿ ಜೊತೆ ನಿರ್ಮಾಣ ಹಂತದ ಮನೆಗಳ ಬಳಿಯ ಕಂಬಿಗಳು ಕೂಡ ಕಳ್ಳತನವಾಗುತ್ತಿವೆ. ಬೈಕ್ ನಲ್ಲಿ ಬಂದು ಕಳವು ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸರಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಳ್ಳನನ್ನು ಹಿಡಿಯಲು ಗ್ರಾಮಸ್ಥರು ಯತ್ನಿಸಿದ್ದು, ಬೈಕ್ ಮತ್ತು ಬ್ಯಾಟರಿ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.