“ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ನಿನ್ನೆ ಒಂದು ತಂಡವೇ ಇಲ್ಲಿಗೆ ಆಗಮಿಸಿ ಸಭೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸಭೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕನ್ನಡ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಹೀಗಾಗಿ ನಿಮಗೆ ಅಭಿನಂದನೆ ಸಲ್ಲಿಸಬೇಕು. ನಿಮ್ಮ ಪರಿಶ್ರಮದಿಂದ ಎಲ್ಲಾ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ”ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸಿನಿಮಾ, ನಿಮ್ಮ ಕಲೆ ಮೂಲಕ ಸರ್ಕಾರದ ಆಚಾರ ವಿಚಾರ ಪ್ರಚಾರ ಮಾಡುವುದು ನಿಮ್ಮ ಧರ್ಮ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಮನೆಗಾಗಿ, ನಮ್ಮ ಪಕ್ಷದವರಿಗಾಗಿ ಮಾತ್ರ ಜಾರಿ ಮಾಡಿದ್ದೇವೆಯೇ? ಇದಕ್ಕಾಗಿ 56 ಸಾವಿರ ಕೋಟಿ ಹಣ ಪ್ರತಿ ವರ್ಷ ವಿನಿಯೋಗಿಸುತ್ತಿದ್ದೇವೆ. ಬಡ ಕುಟುಂಬ ಗಳಿಗೆ ಆರ್ಥಿಕ ಶಕ್ತಿ ಸಿಗಲಿ ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ” ಎಂದರು.
“ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಬೇಕು ಎಂಬುದು ಸಿಎಂ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಸಲ್ಲಿಕೆಯಾಗಿದ್ದ ಯೋಜನೆ ತಿರಸ್ಕಾರಗೊಂಡಿದ್ದು, ಬಜೆಟ್ ನಂತರ ಕೂತು ಚರ್ಚೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಫಿಲ್ಮ್ ಸಿಟಿ ಮಾಡಲಾಗುವುದು. ಕಲೆ ಯಾರಪ್ಪನ ಮನೆ ಆಸ್ತಿಯಲ್ಲ. ಯಾರು ಬೇಕಾದರೂ ಎಂತಹುದೇ ಎತ್ತರಕ್ಕೆ ಬೆಳೆಯಲು ಅವಕಾಶ ಇದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿ ಸಾಗಲಿ. ಸಮಯ ಸಿಕ್ಕರೆ ನಾನು ಸಿನಿಮಾ ವೀಕ್ಷಣೆ ಮಾಡುತ್ತೇನೆ” ಎಂದು ತಿಳಿಸಿದರು.
ನನಗೂ ಚಿತ್ರರಂಗದ ನಂಟಿದೆ: “ಉತ್ತಮ ಸಾಹಿತ್ಯ, ಸಂಗೀತ, ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ನಾನು ಚಿತ್ರ ಪ್ರದರ್ಶಕನಾಗಿದ್ದೆ. ಇಂದಿರಾ ಗಾಂಧಿ ಅವರ ಹೆಸರಲ್ಲಿ ಚಿತ್ರಮಂದಿರವನ್ನು ನಡೆಸಿದ್ದೆ. ಊರಲ್ಲಿ ನಾಲ್ಕು ಟೂರಿಂಗ್ ಟಾಕೀಸ್ ಇತ್ತು. ಈಗ ಅದು ನಿಲ್ಲಿಸಿದ್ದೇನೆ. ಇನ್ನು ನಮ್ಮ ಮಾಲ್ ಗಳಲ್ಲಿ 23 ತೆರೆಗಳ ಸಿನಿಮಾ ಕೇಂದ್ರಗಳಿವೆ. ಇವುಗಳಲ್ಲಿ ಒಂದರಲ್ಲೂ ಒಂದು ಸಿನಿಮಾ ನೋಡುವ ಸಮಯಾವಕಾಶ ಸಿಕ್ಕಿಲ್ಲ” ಎಂದರು.
“ನಾನು ಚಿತ್ರಮಂದಿರ ನಡೆಸುವಾಗ ಸಿನಿಮಾ ನೋಡಿಯೇ ಡಬ್ಬಾ ತೆಗೆದುಗೊಂದು ನಮ್ಮ ಊರಿನ ಚಿತ್ರ ಮಂದಿರದಲ್ಲಿ ಹಾಕುತ್ತಿದ್ದೆ. ಸತ್ಯ ಹರಿಶ್ಚಂದ್ರ ಸಿನಿಮಾವನ್ನು 15 ಬಾರಿ ನೋಡಿದ್ದೆ. ಮದುವೆಯಾದ ನಂತರ ನನ್ನ ಪತ್ನಿಯನ್ನು ಕರೆದುಕೊಂಡು ಈ ಸಿನಿಮಾ ತೋರಿಸಿದ್ದೆ. ಬೇಕಾದಷ್ಟು ರಾಜಕಾರಣಿಗಳಿಗೂ ಚಿತ್ರರಂಗಕ್ಕೂ ನಂಟಿದೆ. ರಾಜಕಾರಣಿಗಳಲ್ಲಿ ಅನೇಕರು ತಮ್ಮ ಮಕ್ಕಳನ್ನು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿ ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ವಿಫಲವಾಗಿದ್ದಾರೆ. ನಮ್ಮ ರಾಜ್ಯದವರೇ ಆದ, ಜಯಲಲಿತಾ, ರಜನಿಕಾಂತ್ ಬೇರೆ ರಾಜ್ಯಗಳಲ್ಲಿ ಬೆಳೆದು ರಾಜ್ಯ ಹಾಗೂ ರಾಷ್ಟ್ರದ ನಾಯಕತ್ವ ವಹಿಸಿದ್ದಾರೆ. ಮುಖ್ಯಮಂತ್ರಿಗಳೂ ಆಗಿದ್ದಾರೆ” ಎಂದು ತಿಳಿಸಿದರು.
ಕಲಾವಿದರು ಬಣ್ಣ ಹಚ್ಚಿ ನಟನೆ ಮಾಡಿದರೆ, ನಾವು ರಾಜಕಾರಣಿಗಳು ಬಣ್ಣ ಹಾಕಿಕೊಳ್ಳದೆ ನಿತ್ಯ ಸಿನಿಮಾ ಮಾಡುತ್ತಿದ್ದೇವೆ ಎಂದು ಚಟಾಕಿ ಹಾರಿಸಿದರು. “ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕಲಾವಿದರ ಪೈಕಿ, ಸಾಧು ಕೋಕಿಲ ಹಾಗೂ ದುನಿಯಾ ವಿಜಿ ಅವರನ್ನು ಬಿಟ್ಟರೆ ಮತ್ಯಾರು ಭಾಗವಹಿಸಲಿಲ್ಲ. ಕೆಲವರು ನಟರನ್ನು ಬಳಸಿಕೊಂಡು ನಂತರ ಬಿಸಾಡುತ್ತಾರೆ. ನಾವು ಆ ರೀತಿ ಮಾಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಯಾರು ನಮಗೆ ಸಹಾಯ ಮಾಡುತ್ತಾರೋ ಅವರನ್ನು ಗುರುತಿಸಬೇಕು. ನಮಗೆ ಎಲ್ಲ ರಂಗದಲ್ಲಿಯೂ ಯಾರ್ಯಾರ ನಾಡಿ ಮಿಡಿತ ಏನಿದೆ ಎಂಬುದರ ಅರಿವಿದೆ. ಕಷ್ಟ ಕಾಲದಲ್ಲಿ ಆಗದಿದ್ದ ಮೇಲೆ ಏನು ಪ್ರಯೋಜನ” ಎಂದು ಪ್ರಶ್ನಿಸಿದರು.