ಬೆಂಗಳೂರು: ಆರು ವರ್ಷವಾಗದ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶ ನೀಡದ ಶಿಕ್ಷಣ ನೀತಿಯಿಂದ ಮಕ್ಕಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯದ ಪೋಷಕರ ನಿಯೋಗ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಒತ್ತಾಯಿಸಿದೆ.
ಈ ಸಂಬಂಧ ಸುಧೀನ್ ಕುಮಟಾ, ಮೇಘನಾ, ಶೀತಲ್ ಶೆಟ್ಟಿ ಮತ್ತಿತರರ ನಿಯೋಗ ಇಂದು ಬೆಳಿಗ್ಗೆ ಸದಾಶಿವನಗರದ ನಿವಾಸದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದೆ.
ಆರು ವರ್ಷಕ್ಕಿಂತ ಒಂದೆರಡು ತಿಂಗಳು ಕಡಿಮೆಯಿದ್ದರೂ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶ ಸಿಗುತ್ತಿಲ್ಲ.ಈ ಅಲ್ಪ ಅಂತರವನ್ನು ಸರಿಪಡಿಸಿ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶಾವಕಾಶ ಕಲ್ಪಿಸಬೇಕು.
ಇಂತಹ ಅನ್ಯಾಯಕ್ಕೆ ಹಲವು ಖಾಸಗಿ ಶಾಲೆಗಳ ನೀತಿಯೂ ಒಂದು ಕಾರಣ ಎಂದು ದೂರಿದ ನಿಯೋಗ,ಮೂರು ವರ್ಷ ತುಂಬದ ಮಕ್ಕಳಿಗೆ ಹಲವು ಖಾಸಗಿ ಶಾಲೆಗಳು ಮಾಂಟೆಸ್ಸರಿ 1, ಮಾಂಟೆಸ್ಸರಿ 2 ಮತ್ತು ಮಾಂಟೆಸ್ಸರಿ 3 ಹೆಸರಿನಲ್ಲಿ ಪ್ರವೇಶ ನೀಡುತ್ತಿವೆ.
ಇದೇ ರೀತಿ ಮೂರು ವರ್ಷ ತುಂಬದ ಮಕ್ಕಳಿಗೆ ನರ್ಸರಿ,ಎಲ್.ಕೆ.ಜಿ ಮತ್ತು ಯು.ಕೆ.ಜಿ ಎಂದು ಮೂರು ವರ್ಷಗಳ ಶಿಕ್ಷಣ ನೀಡುತ್ತಿವೆ.ಹೀಗೆ ಶಿಕ್ಷಣ ಪಡೆದ ಮಕ್ಕಳಿಗೆ ಆರು ವರ್ಷ ತುಂಬದೆ ಇದ್ದರೆ ಒಂದನೇ ತರಗತಿಗೆ ಪ್ರವೇಶ ಸಿಗುತ್ತಿಲ್ಲ.ಹೀಗಾಗಿ ರಾಜ್ಯದ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ.
ಹೀಗೆ ಖಾಸಗಿ ಶಾಲೆಗಳು ಮೂರು ವರ್ಷ ತುಂಬುವ ಮುನ್ನ ಪ್ರವೇಶಾವಕಾಶ ನೀಡುವ ಬದಲು ಶಿಕ್ಷಣ ನೀತಿಯ ಬಗ್ಗೆ ಸ್ಪಷ್ಟವಾಗಿ ಹೇಳಬೇಕು.ಆದರೆ ಹಣದಾಸೆಯಿಂದ ಮಕ್ಕಳಿಗೆ ಪ್ರವೇಶ ನೀಡುವುದಲ್ಲದೆ ಅಂತಿಮ ಕ್ಷಣದಲ್ಲಿ ಮಕ್ಕಳಿಗೆ ಅನ್ಯಾಯವಾದಾಗ ಕೈ ತೊಳೆದುಕೊಂಡು ಸುಮ್ಮನಿರುತ್ತವೆ.
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಆರು ವರ್ಷ ತುಂಬದ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶವಿಲ್ಲ ಎಂಬ ಕುರಿತು ಪೋಷಕರಿಗೆ ಸ್ಪಷ್ಟ ಮಾಹಿತಿ ನೀಡುವ ಕೆಲಸವಾಗಬೇಕು.ಅದೇ ರೀತಿ ಈಗ ಆರು ವರ್ಷ ತುಂಬಲು ಒಂದೆರಡು ತಿಂಗಳು ಕಡಿಮೆ ಇರುವ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು,ಮಕ್ಕಳಿಗಾಗುತ್ತಿರುವತೊಂದರೆ ಮತ್ತು ಅವಧಿಗೂ ಮುನ್ನ ಮೂರು ವರ್ಷಗಳ ಶಿಕ್ಷಣ ನೀಡುವ ಖಾಸಗಿ ಶಾಲೆಗಳ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ಆರು ವರ್ಷ ತುಂಬದ ಕಾರಣಕ್ಕಾಗಿ ಒಂದನೇ ತರಗತಿಗೆ ಪ್ರವೇಶ ಸಿಗದೆ ಮಕ್ಕಳಿಗಾಗುತ್ತಿರುವ ತೊಂದರೆಯ ಬಗ್ಗೆಯೂ ಸಂಬಂಧಿಸಿದವರ ಗಮನ ಸೆಳೆಯುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.