Menu

ಗರ್ಭಧಾರಣೆಗೆ ಯೋಚಿಸುತ್ತಿರುವ ಪ್ರತಿಯೊಬ್ಬ ದಂಪತಿ ತಿಳಿಯಲೇಬೇಕಾದ ಮಾಹಿತಿ

doctor

ಭಾರತದಲ್ಲಿ ಅನೇಕ ಮಂದಿ ಒಂದು ಹೊಸ ಸವಾಲು ಎದುರಿಸುವ ಹಂತದಲ್ಲಿದ್ದಾರೆ. ಅದೇನೆಂದರೆ ಹ್ಯೂಮನ್ ಪ್ಯಾಪಿಲೋಮವೈರಸ್ (ಹೆಚ್‌ಪಿವಿ) ಸೋಂಕು. ಬಹಳಷ್ಟು ಮಂದಿ ಈ ಸೋಂಕು ಹೊಂದುವ ಅಪಾಯ ಎದುರಿಸುತ್ತಿದ್ದಾರೆ.

ಹೆಚ್ಚಿನ ಪ್ರಕರಣಗಳು ಪತ್ತೆಯಾಗದೆ ಅಥವಾ ಚಿಕಿತ್ಸೆ ಪಡೆಯದ ಹಂತದಲ್ಲಿವೆ. ಅಂದಾಜಿನ ಪ್ರಕಾರ, 15 ವರ್ಷ ಮತ್ತು ಹೆಚ್ಚಿನ ವಯಸ್ಸಿನ 2.4 ಕೋಟಿ ಮಹಿಳೆಯರು ಹೆಚ್‌ಪಿವಿ ಸೋಂಕನ್ನು ಹೊಂದಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ, ಅಷ್ಟೇ ಸಂಖ್ಯೆಯ ಅಥವಾ ಅದಕ್ಕಿಂತ ಹೆಚ್ಚಿನ ಪುರುಷರು ಕೂಡ ಈ ಸೋಂಕಿಗೆ ಒಳಗಾಗಿರಬಹುದು. (ಮೂಲ: ಎನ್ಎಲ್ಎಂ). ಈ ಕಾರಣಕ್ಕಾಗಿಯೇ ರಾಷ್ಟ್ರೀಯ ಹೆಚ್‌ಪಿವಿ ಲಸಿಕಾ ಅಭಿಯಾನದಂತಹ ಯೋಜನೆಗಳು ಈಗ ಬಹಳ ಪ್ರಾಮುಖ್ಯತೆ ಪಡೆದಿವೆ. ಯಾಕೆಂದರೆ ‘ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಲೇಸು’ ಅಲ್ಲವೇ. ಆದರೆ ಈಗಾಗಲೇ ಹೆಚ್‌ಪಿವಿ ಸೋಂಕಿಗೆ ಒಳಗಾಗಿರುವ ಮತ್ತು ತಮ್ಮದೇ ಆದ ಮಗುವನ್ನು ಹೊಂದಲು ಬಯಸುವ ಲಕ್ಷಾಂತರ ಜನರ ಕಥೆಯೇನು?

ಹೆಚ್ಚಿನ ದಂಪತಿಗಳಲ್ಲಿ ಹೆಚ್‌ಪಿವಿ ನೇರವಾಗಿ ಫಲವತ್ತತೆಯನ್ನು ಕುಂದಿಸದಿದ್ದರೂ, ದೀರ್ಘಕಾಲದ ಸೋಂಕುಗಳು ಅಥವಾ ಅದಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಗರ್ಭಧಾರಣೆ ಮೇಲೆ ಅಪಾಯವನ್ನು ಉಂಟುಮಾಡಬಹುದು. ಆದರೆ ಹೆಚ್‌ಪಿವಿ ಹೊಂದಿರುವ ವ್ಯಕ್ತಿಯು ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್), ಫಲವತ್ತತೆ ಸಂರಕ್ಷಣೆ (ಫರ್ಟಿಲಿಟಿ ಪ್ರಿಸರ್ವೇಷನ್) ನಂತಹ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಗಳ (ಎ ಆರ್ ಟಿ) ಮೂಲಕ ಅಥವಾ ಕೆಲವು ಸಂದರ್ಭಗಳಲ್ಲಿ ನೈಸರ್ಗಿಕವಾಗಿಯೂ ಮಕ್ಕಳನ್ನು ಪಡೆಯಬಹುದು. ಗರ್ಭಧಾರಣೆಯನ್ನು ಯೋಚಿಸುತ್ತಿರುವ ಪ್ರತಿಯೊಬ್ಬ ದಂಪತಿಗಳು ಹೆಚ್‌ಪಿವಿ ಮತ್ತು ಫಲವತ್ತತೆಯ ಬಗ್ಗೆ ಈ ಕೆಳಗಿನ ಅಂಶಗಳನ್ನು ತಿಳಿದಿರಬೇಕು.

ಗರ್ಭಧಾರಣೆಪೂರ್ವ ಹೆಚ್‌ಪಿವಿ ತಪಾಸಣೆ:

ಸೋಂಕು ಹಲವು ಬಾರಿ ಯಾವುದೇ ಕಾಣಿಸುವ ಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ, ಗರ್ಭಧರಿಸಲು ಪ್ರಯತ್ನಿಸುವ ಮೊದಲು ಹೆಚ್‌ಪಿವಿ ತಪಾಸಣೆ ಮಾಡಿಸಿಕೊಳ್ಳುವುದು ಮೊದಲ ಹಂತ. ಈ ತಪಾಸಣೆಯು ಗರ್ಭಧಾರಣೆಯ ಮೊದಲು ಸೋಂಕಿನ ಉಪಸ್ಥಿತಿ ಅಥವಾ ಹರಡುವಿಕೆಯನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದಂಪತಿಗಳು ಯಾವುದೇ ಸಂಭಾವ್ಯ ಫಲವತ್ತತೆ ಸಮಸ್ಯೆಗಳನ್ನು ಸೂಕ್ತವಾಗಿ ಎದುರಿಸಬಹುದು. ಸೋಂಕಿನ ಹಂತಕ್ಕೆ ಅನುಗುಣವಾಗಿ, ದಂಪತಿಗಳು ವಿವಿಧ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.

ಆರಂಭಿಕ ಅಥವಾ ತಾತ್ಕಾಲಿಕ ಹೆಚ್‌ಪಿವಿ:

ಹೆಚ್ಚಿನ ಸಂದರ್ಭದಲ್ಲಿ ಹೆಚ್‌ಪಿವಿ ಸೋಂಕುಗಳು ದೇಹದ ರೋಗನಿರೋಧಕ ಶಕ್ತಿಯ ಮೂಲಕ 6-24 ತಿಂಗಳೊಳಗೆ ನೈಸರ್ಗಿಕವಾಗಿ ಗುಣವಾಗುತ್ತವೆ. ಆದ್ದರಿಂದ ಆರಂಭಿಕ ಅಥವಾ ಕಡಿಮೆ- ಅಪಾಯಕಾರಿ (ಲೋ ರಿಸ್ಕ್) ಹೆಚ್‌ಪಿವಿ ಹೊಂದಿರುವ ಜನರು ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೆ ನೈಸರ್ಗಿಕವಾಗಿ ಗರ್ಭ ಧರಿಸಬಹುದು. ಇಂತಹ ಸಂದರ್ಭಗಳಲ್ಲಿ, ಅನಗತ್ಯ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬೇಕು ಮತ್ತು ಲಸಿಕೆ ಹಾಕಿಸಿಕೊಳ್ಳದಿದ್ದರೆ ತಕ್ಷಣ ಹಾಕಿಸಿಕೊಳ್ಳಬೇಕು. ನಂತರ ಪುನರಾವರ್ತಿತ ಹೆಚ್‌ಪಿವಿ ಪರೀಕ್ಷೆಗಳ ಮೂಲಕ ಸೋಂಕನ್ನು ಗಮನಿಸಬಹುದು. ಇದರ ಜೊತೆಗೆ, ಪುರುಷರು ವೀರ್ಯಾಣುಗಳ ಚಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಲು ನಿಯಮಿತ ವೀರ್ಯದ ವಿಶ್ಲೇಷಣೆಯನ್ನು ಮಾಡಿಸಿಕೊಳ್ಳಬಹುದು. ಈ ಸಮಯದಲ್ಲಿ, ದಂಪತಿಗಳು ಸೋಂಕು ಸಂಪೂರ್ಣವಾಗಿ ಗುಣವಾಗುವವರೆಗೆ ಕಾಯುವ ಬದಲು ಗರ್ಭಧರಿಸಲು ಪ್ರಯತ್ನಿಸಬಹುದು ಅಥವಾ ಸೋಂಕಿನ ನಿವಾರಣೆಯ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ದೀರ್ಘಕಾಲದ ಲಘು (ಲೋ ಗ್ರೇಡ್) ಸೋಂಕು

ಹೆಚ್‌ಪಿವಿ ನೇರವಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರದಿದ್ದರೂ, ಸಂತಾನೋತ್ಪತ್ತಿ ಅಂಗಗಳಲ್ಲಿನ ಬದಲಾವಣೆಗಳ ಮೂಲಕ ಅಲ್ಪಮಟ್ಟದ ಅಡಚಣೆಯನ್ನು ಉಂಟುಮಾಡಬಹುದು. ಮಹಿಳೆಯರಲ್ಲಿ, ದೀರ್ಘಕಾಲದ ಲಘು ಹೆಚ್‌ಪಿವಿ ಗರ್ಭಕಂಠದ ಲೋಳೆಯ ಬದಲಾವಣೆ ಅಥವಾ ಲಘು ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದ ವೀರ್ಯಾಣುಗಳ ಚಲನೆಗೆ ಅಡ್ಡಿ, ಭ್ರೂಣ ಸೃಷ್ಟಿ ವೈಫಲ್ಯ ಅಥವಾ ಆರಂಭಿಕ ಗರ್ಭಪಾತದ ಅಪಾಯ ಉಂಟಾಗಬಹುದು. ಪುರುಷರಲ್ಲಿ, ಇದು ವೀರ್ಯಾಣುಗಳ ಚಲನೆಯನ್ನು ಕಡಿಮೆ ಮಾಡುತ್ತದೆ, ಡಿಎನ್‌ಎ ಫ್ರಾಗ್ಮೆಂಟೇಷನ್ ಹೆಚ್ಚಿಸುತ್ತದೆ ಮತ್ತು ವೀರ್ಯಾಣುಗಳ ಗಾತ್ರ ಹಾಗೂ ಆಕಾರವನ್ನು ಬದಲಾಯಿಸುತ್ತದೆ. ಈ ವೈರಸ್ ವೀರ್ಯಾಣುವಿನಿಂದ ಅಂಡಾಣುವಿಗೆ ಹರಡಬಹುದು, ಜೊತೆಗೆ ಭ್ರೂಣದ ಗುಣಮಟ್ಟ ಮತ್ತು ಅದು ಗರ್ಭಾಶಯದಲ್ಲಿ ಅಂಟಿಕೊಳ್ಳುವ ಸಾಧ್ಯತೆಯ ಮೇಲೆ ಪರಿಣಾಮ ಬೀರಬಹುದು.

ಇಂತಹ ಸಂದರ್ಭದಲ್ಲಿ, ದಂಪತಿ ಜಾಗರೂಕತೆಯಿಂದ ಕಾಯಬಹುದು ಮತ್ತು ಸೋಂಕು ನಿವಾರಣೆಗೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಫಲವತ್ತತೆ- ಸ್ನೇಹಿ ಲೂಬ್ರಿಕೇಶನ್ ಬಳಸಬಹುದು. ಪುರುಷರು ತಮ್ಮ ವೀರ್ಯದಲ್ಲಿನ ವೈರಲ್ ಲೋಡ್ ಅನ್ನು ಕಡಿಮೆ ಮಾಡಲು ‘ಸ್ಪರ್ಮ್ ವಾಷಿಂಗ್’ ವಿಧಾನವನ್ನು ಆರಿಸಿಕೊಳ್ಳಬಹುದು.

ಉನ್ನತ ದರ್ಜೆಯ ಸೋಂಕು ಅಥವಾ ಕ್ಯಾನ್ಸರ್ ಪೂರ್ವ ಹಂತ

ಹೆಚ್‌ಪಿವಿ ಸೋಂಕು ಉನ್ನತ ಹಂತಕ್ಕೆ ತಲುಪಿದ್ದರೆ ಅದನ್ನು ನಿಭಾಯಿಸುವುದು ಕಷ್ಟಕರ. ಆದರೆ ಸೂಕ್ತ ಚಿಕಿತ್ಸಾ ಯೋಜನೆ ಮತ್ತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಗಳ ಮೂಲಕ ಮಗು ಪಡೆಯಲು ಸಾಧ್ಯವಿದೆ. ಸಾಧ್ಯವಾದರೆ, ಗರ್ಭಕಂಠದ ಶಸ್ತ್ರಚಿಕಿತ್ಸೆಗಳನ್ನು ಗರ್ಭಧಾರಣೆಯ ನಂತರದವರೆಗೆ ಮುಂದೂಡಬಹುದು. ಒಂದು ವೇಳೆ ಚಿಕಿತ್ಸೆ ಅನಿವಾರ್ಯವಾದರೆ, ‘ಕೋಲ್ಡ್ ನೈಫ್ ಕೋನ್ ಬಯಾಪ್ಸಿ’ಯಂತಹ ಕೆಲವು ವಿಧಾನಗಳು ಉತ್ತಮ ಫಲವತ್ತತೆಯ ಫಲಿತಾಂಶಗಳನ್ನು ನೀಡುತ್ತವೆ. ಇಂತಹ ಗಂಭೀರ ಸಂದರ್ಭದಲ್ಲಿ ಫಲವತ್ತತೆ ಸಮಸ್ಯೆ ಇದ್ದರೆ ಐವಿಎಫ್ ಮೊರೆ ಹೋಗುವುದು ಉತ್ತಮ.

ಕ್ಯಾನ್ಸರ್ ಹಂತ:

ಹೆಚ್‌ಪಿವಿ ಕ್ಯಾನ್ಸರ್ ಆಗಿ ಬದಲಾದಾಗ, ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿಗೆ ಮುನ್ನ ‘ಫಲವತ್ತತೆ ಸಂರಕ್ಷಣೆ’ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಚಿಕಿತ್ಸೆಯ ನಂತರ ಮಹಿಳೆಯು ಹೆರಲು ಸಾಧ್ಯವಾಗದಿದ್ದರೆ, ಅವಳು ತನ್ನ ಸಂರಕ್ಷಿತ ಅಂಡಾಣುವಿನ ಮೂಲಕ ಮಗುವನ್ನು ಪಡೆಯಲು ‘ಬಾಡಿಗೆ ತಾಯಿ’ ಪದ್ಧತಿಯನ್ನು ಆರಿಸಿಕೊಳ್ಳಬಹುದು.

ಸರಿಯಾದ ಮೇಲ್ವಿಚಾರಣೆ, ಸೋಂಕು ನಿವಾರಣೆಯ ನೆರವು ಮತ್ತು ವೈದ್ಯಕೀಯ ಮಾರ್ಗದರ್ಶನದೊಂದಿಗೆ, ಹೆಚ್‌ಪಿವಿ ಹೊಂದಿರುವ ಜನರು ಸೋಂಕಿನ ಯಾವುದೇ ಹಂತದಲ್ಲೂ – ತಾಳ್ಮೆ ಮತ್ತು ಸತತ ಪ್ರಯತ್ನದೊಂದಿಗೆ ಯಶಸ್ವಿಯಾಗಿ ಗರ್ಭಧಾರಣೆಯನ್ನು ಮಾಡಬಹುದು.

ಡಾ. ಚಿನ್ಮಯಿ, ಎಂ.ಬಿ.ಬಿ.ಎಸ್, ಎಂ.ಎಸ್ (ಓ.ಬಿ.ಜಿ), ಎಫ್.ಆರ್.ಎಂ, ಸೀನಿಯರ್ ಕನ್ಸಲ್ಟೆಂಟ್ ಫರ್ಟಿಲಿಟಿ ಸ್ಪೆಷಲಿಸ್ಟ್, ಓಯಸಿಸ್ ಫರ್ಟಿಲಿಟಿ

Related Posts

Leave a Reply

Your email address will not be published. Required fields are marked *