ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಗೆ ನರ್ಸ್ಗಳೇ ಹೆರಿಗೆ ಮಾಡಿಸಿದ್ದರು. ಈ ವೇಳೆ ಶಿಶು ಮೃತಪಟ್ಟಿದ್ದು, ಬಾಣಂತಿ ತೀವ್ರ ರಕ್ತಸ್ರಾವದಿಂದ ಅಸು ನೀಗಿರುವುದಾಗಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಢವಳಾರ ಗ್ರಾಮದ ಮೈತ್ರಾರನ್ನು ಹೆರಿಗೆಗಾಗಿ ಯಂಕಂಚಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸಿಂದಗಿ ತಾಲೂಕು ಆಸ್ಪತ್ರೆಗೆ ಕಳಿಸಲಾಗಿತ್ತು. ಆಗ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರಲಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನರ್ಸ್ಗಳು ಹಾಗೂ ಇತರ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ಹೆರಿಗೆಯ ವೇಳೆ ಗಂಡು ಶಿಶು ಮೃತಪಟ್ಟಿದೆ. ಮೈತ್ರಾಗೆ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಿತಿ ಗಂಭೀರಗೊಂಡಾಗ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಅಂಬ್ಯುಲೆನ್ಸ್ನಲ್ಲಿ ವಿಜಯಪುರಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆ ಮೈತ್ರಾ ಮೃತಪಟ್ಟಿದ್ದಾರೆ. ಬಾಣಂತಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ಆರೋಪಿಸಿದ್ದು, ವೈದ್ಯರು ಕರ್ತವ್ಯದಲ್ಲಿದ್ದರೆ ಇಬ್ಬರ ಜೀವ ಉಳಿಯುತ್ತಿತ್ತೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಸಂಪತ್ ಕುಮಾರ್, ಕರಣದ ಬಗ್ಗೆ ಇನ್ನಷ್ಟು ತನಿಖೆಯಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವು ದಾಗಿ ತಿಳಿಸಿದ್ದಾರೆ.


