ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಆರು ತಿಂಗಳ ಮಗುವೂ ಸೇರಿದೆ. 1400 ಜನ ಅಸ್ವಸ್ಥರಾಗಿದ್ದು, ಇಂದೋರ್ ಮಹಾನಗರ ಪಾಲಿಕೆಯ ಹಲವು ಅಧಿಕಾರಿಗಳನ್ನು ಮುಖ್ಯಮಂತ್ರಿ ಮೋಹನ ಯಾದವ್ ಅಮಾನತು ಮಾಡಿದ್ದಾರೆ.
ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ಶೌಚಾಲಯದ ನೀರು ಬೆರೆತು ಸಂಪೂರ್ಣ ನೀರು ಕಲುಷಿತಗೊಂಡ ಪರಿಣಾಮ, ಒಂಬತ್ತು ದಿನದಲ್ಲಿ 1400ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡು, 272ಕ್ಕೂ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಕ್ಕಳಿಲ್ಲದೆ ಹತ್ತು ವರ್ಷ ಕೊರಗಿದ್ದ ದಂಪತಿಗೆ ಆರು ತಿಂಗಳ ಹಿಂದೆ ಮಗು ಜನಿಸಿತ್ತು, ಕಲುಷಿತ ನೀರಿಗೆ ಆ ಮಗುವೂ ಬಲಿಯಾಗಿದೆ. ಕೆಲವು ದಿನಗಳ ಹಿಂದೆ ಪುರಸಭೆ ಸರಬರಾಜು ಮಾಡುವ ನೀರನ್ನು ಸೇವಿಸಿದ ನಂತರ ನಿವಾಸಿಗಳಲ್ಲಿ ವಾಂತಿ, ನಿರ್ಜಲೀಕರಣ ಮತ್ತು ತೀವ್ರ ಜ್ವರ ಕಂಡು ಬಂದಿವೆ. ನಲ್ಲಿ ನೀರು ಬಣ್ಣ ಕಳೆದುಕೊಂಡು ದುರ್ವಾಸನೆ ಬೀರುತ್ತಿರುವುದನ್ನು ನಿವಾಸಿಗಳು ಗಮನಿಸಿ ನಾಗರಿಕ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಲ್ಳದ ಕಾರಣ ಈ ದುರಂತ ನಡೆದಿದೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ಅತಿಸಾರ ಮತ್ತು ವಾಂತಿಯಿಂದ ನಿವಾಸಿಗಳ ಸಾವು ಸಂಭವಿಸಿದ್ದು, ಅನಾರೋಗ್ಯವುಂಟಾಗಿದೆ.


