ಬೆಳಗಾವಿ:ಬಿಪಿಎಲ್ ಪಡಿತರದಾರರಿಗೆ ವಿತರಿಸುವ ಅನ್ನಭಾಗ್ಯ ಅಕ್ಕಿಯ ಬದಲಿಗೆ ಬರುವ ಜನವರಿಯಿಂದ ಇಂದಿರಾ ಕಿಟ್ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೇಲ್ಮೈಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿಟಿ ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿ, ಹೊರ ದೇಶಗಳಿಗೆ/ರಾಜ್ಯಗಳಿಗೆ ಮಾರಾಟ ಮಾಡುವ ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದ್ದು,ವಿಶೇಷ ತನಿಖಾ ತಂಡ(ಎಸ್ ಐಟಿ)ರಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದಿರಾ ಕಿಟ್ ವಿತರಣೆಯಿಂದ ಅನ್ನಭಾಗ್ಯ ಅಕ್ಕಿಯ ಅಕ್ರಮವಾಗಿ ಸಂಗ್ರಹಣೆ ಮಾಡಿ, ಹೊರ ದೇಶಗಳಿಗೆ/ರಾಜ್ಯಗಳಿಗೆ ಮಾರಾಟ ಮಾಡುವುದು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟ ಪ್ರಕರಣದ ಸಂಬಂಧ 570 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಇಲಾಖೆ ಕರ್ತೃವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದ ಸಂಬಂಧ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೆ.ಎಫ್.ಸಿ.ಎಸ್.ಸಿ. ಗೋದಾಮು ವ್ಯವಸ್ಥಾಪಕರನ್ನು ಅಮಾನತ್ತುಗೊಳಿಸಲಾಗಿರುತ್ತದೆ ಎಂದು ಹೇಳಿದರು.


