Wednesday, December 24, 2025
Menu

ದೇಶದ ವಿಮಾನಯಾನ ವ್ಯವಸ್ಥೆಯ ಹುಳುಕನ್ನು ಬಯಲಿಗೆಳೆದ ಇಂಡಿಗೊ ಬಿಕ್ಕಟ್ಟು

IndiGo

ಒಂದು ವಾರದ ಅವಯಲ್ಲಿ ದೇಶದ ವಿಮಾನಯಾನ ಕ್ಷೇತ್ರ ಅಯೋಮಯವಾದದ್ದನ್ನು ಕಂಡಿದ್ದೇವೆ. ಸರಕಾರದ ಒಂದು ನಿಯಮವನ್ನೇ ಮುಂದು ಮಾಡಿಕೊಂಡು ಇಡೀ ವ್ಯವಸ್ಥೆ ಅಮಾಯಕ ಪ್ರಯಾಣಿಕರ ಜೊತೆ ಚೆಲ್ಲಾಟ ಆಡಿದ ಈ ಘಟನೆ ಎತ್ತಿರುವ ಪ್ರಶ್ನೆಗಳು ಹಲವು.

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಸೃಷ್ಟಿಸಿದ ಬಿಕ್ಕಟ್ಟು ಕೇವಲ ಒಂದು ಕಂಪನಿಯ ಆಡಳಿತ ವೈಫಲ್ಯವಲ್ಲ ಬದಲಿಗೆ ಇದು ಭಾರತದ ವಿಮಾನಯಾನ ನೀತಿ, ಸುರಕ್ಷತಾ ನಿಯಮಗಳು, ಸಿಬ್ಬಂದಿ ತರಬೇತಿ, ನಿಗಾ ವ್ಯವಸ್ಥೆಗಳ ಜಾಗರೂಕತೆಯನ್ನು ಮರುಚಿಂತನೆಗೆ ನೂಕುವ ದೊಡ್ಡ ಘಟನೆಯಾಗಿದೆ.

ಸಾವಿರಗಳ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ರದ್ದಾದಾಗ ಪ್ರಯಾಣಿಕರ ದಿನನಿತ್ಯದ ಜೀವನ ಮಾತ್ರ ಅಲ್ಲ, ದೇಶದ ವಾಯುಯಾನ ಕ್ಷೇತ್ರವೇ ಬುಡಮೇಲಾಯಿತು. ಅಸ್ತವ್ಯಸ್ತವಾಯಿತು. ಈ ಘಟನೆಯ ಆಳಕ್ಕೆ ಇಳಿದು ನೋಡಿದಾಗ ಭಾರತದ ವೈಮಾನಿಕ ಸಂಚಾರ ವ್ಯವಸ್ಥೆಯ ಅನೇಕ ಮೂಲಭೂತ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಇಂಡಿಗೋ ಬಿಕ್ಕಟ್ಟಿನ ಮೊದಲ ಮತ್ತು ನೇರ ಕಾರಣ ಸಿಬ್ಬಂದಿ ನಿರ್ವಹಣೆಯ ಸಮಸ್ಯೆ. ಹೊಸ ಕೆಲಸ-ವಿಶ್ರಾಂತಿ ನಿಯಮಗಳು ಜಾರಿಗೆ ಬಂದಾಗ, ಕಂಪನಿ ಅದಕ್ಕೆ ತಕ್ಷಣಕ್ಕೆ ಹೊಂದಿಕೊಳ್ಳಲಿಲ್ಲ. ಇದಕ್ಕೆ ಕಾರಣ ಸಿಬ್ಬಂದಿ ವಿಷಯವಾಗಿ ಇಂಡಿಗೋದ ಕರಾಳ ಮುಖ. ಹಲವು ವರ್ಷಗಳಿಂದ ಕಡಿಮೆ ಸಿಬ್ಬಂದಿಯೊಂದಿಗೆ ಹೆಚ್ಚಿನ ಹಾರಾಟ ನಡೆಸುತ್ತ ಬಂದಿದ್ದ ಕಂಪನಿಯು ಬದಲಾವಣೆ ಬಂದೆರಗಿದಾಗ ದಿಕ್ಕೆಟ್ಟಿದ್ದು ನಿಜ.

ನಿಯಮ ಬದಲಾವಣೆ, ತಾಂತ್ರಿಕ ತೊಂದರೆ, ಅಥವಾ ತುರ್ತು ಪರಿಸ್ಥಿತಿಗಳು ಒಂದೇ ಸಮಯದಲ್ಲಿ ಎದುರಾದಾಗ, ಇಂಡಿಗೊ ಅನುಸರಿಸಿದ ನೀತಿ ಕುಸಿಯುವುದು ಸಹಜ. ಇಲ್ಲಿ ಆದದ್ದೂ ಅದೆ. ಈ ವಿಷಯದಲ್ಲಿ ಕಂಪನಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ.

ಆದರೆ, ಸಮಸ್ಯೆಯ ಚಿತ್ರ ಇಷ್ಟರಲ್ಲಿ ಸಂಪೂರ್ಣವಾಗುವುದಿಲ್ಲ. ಇಂಡಿಗೊ ಅಸಮರ್ಪಕ ಸಿದ್ಧತೆಯಿಂದ ಕುಸಿದಿರುವುದೇನೋ ಸರಿ, ಆದರೆ ನಿಯಂತ್ರಕ ಸಂಸ್ಥೆಗಳಾದ ಡಿಜಿಸಿಎ ಮತ್ತು ವಿಮಾನಯಾನ ಸಚಿವಾಲಯದ ಗಮನಕ್ಕೆ ಇದು ಬಾರಲಿಲ್ಲವೇ? ಅಥವಾ ಬಂದರೂ ಕಣ್ಣು ಮುಚ್ಚಿ ಕುಳಿತಿತ್ತೇ ಎಂಬ ಪ್ರಶ್ನೆ ಏಳುತ್ತದೆ.

ಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳು ತಕ್ಷಣವೇ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ವ್ಯಾಪಕ ಗೊಂದಲ ತಪ್ಪಬಹುದಿತ್ತು. ಡಿಜಿಸಿಎ ಮತ್ತು ವಿಮಾನಯಾನ ಸಚಿವಾಲಯ ಹಲವು ದಿನಗಳ ಕಾಲ ಕೇವಲ ತಮಾಶೆ ನೋಡಲಷ್ಟೇ ಸೀಮಿತವಾಯಿತು.

ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಅಲೆಯುತ್ತಿದ್ದಾಗ, ಮರುಪಾವತಿ ಸಂಬಂತ ಗೊಂದಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾಗ, ಕೇಂದ್ರದಿಂದ ಸ್ಪಷ್ಟ ನಿರ್ದೇಶನಗಳು ಬರಲಿಲ್ಲ. ತುರ್ತು ಸಭೆ, ಸಮನ್ವಯ ತಂಡ, ಸಾರ್ವಜನಿಕ ಮಾಹಿತಿ ಕೇಂದ್ರ- ಇವುಗಳಲ್ಲಿ ಯಾವುದೂ ಸಾಕಾರವಾಗಲಿಲ್ಲ. ಸರ್ಕಾರದ ಈ ನಿಷ್ಕ್ರಿಯತೆ ಬಿಕ್ಕಟ್ಟನ್ನು ಇನ್ನಷ್ಟು ವಿಸ್ತರಿಸಿತು.

ಬಿಕ್ಕಟ್ಟು ಉಂಟಾದ ಮೊದಲ ದಿನದಿಂದಲೇ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ವಿವರಿಸಬೇಕಾಗಿತ್ತು. ಪ್ರಯಾಣಿಕರಿಗೆ ಸ್ಪಷ್ಟ ಮಾರ್ಗಸೂಚಿ, ಮರುಪಾವತಿ ಕುರಿತು ಏಕರೂಪದ ನಿಯಮ, ಮತ್ತು ಬದಲಿ ವಿಮಾನಗಳ ಹಾರಾಟ ಹಂಚಿಕೆ ಇವು ಯಾವುದೂ ಕೂಡ ಬಿಕ್ಕಟ್ಟಿನ ಆರಂಭದಲ್ಲಿ ಜಾರಿಯಾಗಲಿಲ್ಲ.

ದೇಶದಲ್ಲಿ ವಿಮಾನಯಾನ ಕ್ಷೇತ್ರದ ಬೆಳವಣಿಗೆ ಜಗತ್ತಿನ ವೇಗಕ್ಕೆ ಸರಿಹೊಂದಿದ್ದರೂ, ಆ ತಾಳಕ್ಕೆ ತಕ್ಕಂತೆ ನಿಯಂತ್ರಣ ವ್ಯವಸ್ಥೆಯ ಬಲವರ್ಧನೆ ಅಗಿಲ್ಲ ಎಂಬುದು ಸತ್ಯ. ಹೊಸ ನಿಯಮಗಳನ್ನು ರೂಪಿಸುವುದು ಒಂದು ಸಂಗತಿ; ಅವನ್ನೆಲ್ಲಾ ಜಾರಿ ಮಾಡಲು ಕಂಪನಿಗಳ ತಯಾರಿ ಏನಿದೆ ಎಂಬುದು ಪರಿಶೀಲಿಸುವುದು ಇನ್ನೊಂದು ಸಂಗತಿ. ಇಲ್ಲೇ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ ಎದ್ದು ಕಾಣುವಂತಿದೆ.

ಏಕಸ್ವಾಮ್ಯದ ಫಲ

ಕಳೆದ ದಶಕದಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಬಿಕ್ಕಟ್ಟಿಗೆ ಒಳಗಾದವು. ಕೆಲವು ವಿಲೀನಗೊಂಡವು, ಇನ್ನು ಕೆಲವು ಹೇಳಹೆಸರಿಲ್ಲದಂತೆ ಮಾಯವಾದವು. ಅದರ ಪರಿಣಾಮವಾಗಿ ಇಂಡಿಗೊ ಮಾರುಕಟ್ಟೆಯಲ್ಲಿ ಏಕಮೇವ ಪ್ರಾಬಲ್ಯ ಹೊಂದಿದೆ.

ದೇಶದ ಒಟ್ಟು ವಿಮಾನಯಾನದ ಶೇ. ೬೦ ಭಾಗ ಒಂದು ಸಂಸ್ಥೆ ನಿರ್ವಹಿಸುತ್ತದೆ ಎಂದಾಗ ಒಂದು ಸಣ್ಣ ಏರುಪೇರು ಸಹ ದೊಡ್ಡ ಅವಾಂತರ ಸೃಷ್ಟಿಸುತ್ತದೆ. ಇದಕ್ಕೆ ಪ್ರಸ್ತುತ ಬಿಕ್ಕಟ್ಟೇ ಉದಾಹರಣೆ.

ಒಂದಿಡೀ ಕ್ಷೇತ್ರವನ್ನು ಒಂದೇ ಸಂಸ್ಥೆ ವ್ಯಾಪಿಸಿಕೊಳ್ಳುತ್ತಿದೆ ಎಂದಾಗ ಅದರ ಸಾಧಕ-ಬಾಧಕ ಮತ್ತು ಕಾರಣಗಳನ್ನು ವಿಷ್ಲೇಶಿಸಬೇಕಾದ್ದು ಸರಕಾರ ಮತ್ತು ನಿಯಂತ್ರಕರ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತವಾಗಿದ್ದಿದ್ದರೇ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.

ಚಿತ್ರಗಳಲ್ಲಿ ಹೀರೋ ಖಳನನ್ನು ಹಿಡಿದ ಮೇಳೆ ಬರುವ ಪೊಲೀಸರಂತೆ ಇಂಡಿಗೊ ಬಿಕ್ಕಟ್ಟು ತೀರಿದ ಬಳಿಕ ಸರಕಾರದ ಮಂತ್ರಿ ವಿಮಾನಯಾನ ಕೇತ್ರಕ್ಕೆ ಹೊಸ ನೀರಿನ ಅಗತ್ಯ ಇದೆ ಎಂದು ಹೇಳಿರುವುದೇ ಇದಕ್ಕೆ ಪುರಾವೆ ಎನ್ನಬಹುದು.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನಕ್ಕೆ ಪ್ರವೇಶದ ಅಡೆತಡೆಗಳು, ಖರ್ಚಿನ ಏರಿಕೆ ಮತ್ತು ಇಂಧನ ಬಾಧ್ಯತೆಗಳು ಮಧ್ಯಮ ಗಾತ್ರದ ಸಂಸ್ಥೆಗಳನ್ನು ಕುಗ್ಗಿಸುತ್ತಿವೆ.

ಇದು ಸೇವೆಯೂ ಹೌದು

ಯಾವುದೇ ಸರಕಾರ ತನ್ನ ಜನರಿಗೆ ಸಾರಿಗೆ ಸೌಲಭ್ಯ ಒದಗಿಸಿದಾಗ ಅದು ವಾಣಿಜ್ಯಿಕ ಉದ್ದೇಶ ಮಾತ್ರವಲ್ಲದೇ ಸೇವೆಯ ರೂಪವೂ ಆಗಿರುತ್ತದೆ. ಇಂಡಿಗೊ ಬಿಕ್ಕಟ್ಟು ತೆಗೆದೊಡ್ಡಿದ ದೊಡ್ಡ ಪ್ರಶ್ನೆಯೆಂದರೆ ವಿಮಾನಯಾನವನ್ನು ಸಹ ಸಾರ್ವಜನಿಕ ಸೇವೆಯಾಗಿ ಸರ್ಕಾರ ಏಕೆ ನೋಡುತ್ತಿಲ್ಲ ಎಂಬುದಾಗಿದೆ.

ಪ್ರವಾಸೋದ್ಯಮ, ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ತ್ವರಿತ ಸಂಚಾರ, ಹೀಗೆ ಬಹುತೇಕ ಎಲ್ಲವೂ ವಿಮಾನಯಾನದ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇದಕ್ಕೆ ತಕ್ಕ ನೀತಿಗಳನ್ನು ರೂಪಿಸುವುದು, ಅವುಗಳ ಜಾರಿಯ ಮೇಲೆ ನಿಗಾ ಇಡುವುದು ಮತ್ತು ಬಿಕ್ಕಟ್ಟನ್ನು ತಡೆಯಲು ತುರ್ತು ವ್ಯವಸ್ಥೆಗಳನ್ನು ನಿರ್ಮಿಸುವುದು ಸರಕಾರದ ಕರ್ತವ್ಯವೂ ಹೌದಾಗಿದೆ.

ಸರ್ಕಾರದ ನೀತಿ ನಿಷ್ಕ್ರಿಯತೆಗೆ ಕನ್ನಡಿ

ಮೊದಲೇ ಹೇಳಿದಂತೆ ಇಡೀ ದೇಶವನ್ನು ತಲ್ಲಣಗೊಳಿಸಿದ ಈ ಬಿಕ್ಕಟ್ಟು ವ್ಯವಸ್ಥೆಯ ವೈಫಲ್ಯದ ಶಿಶು ಎಂದರೆ ತಪ್ಪಲ್ಲ. ಇಂತಹ ಪರಿಸ್ಥಿತಿ ಉದ್ಭವವಾಗಲು ಸರಕಾರದ ನೀತಿ ನಿರೂಪಣೆಯಲ್ಲಿನ ನಿಷ್ಕ್ರಿಯತೆಯ ಪ್ರಶ್ನೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಮುಂದುವರಿದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ವಿಮಾನಯಾನ ಕ್ಷೇತ್ರ ಬೆರಳೆಣಿಕೆಯ ಸಂಸ್ಥೆಗಳ ಹಿಡಿತದಲ್ಲಿದೆ. ಇದಕ್ಕೆ ಸರಕಾರ ನೇರ ಕಾರಣ ಅಲ್ಲದಿದ್ದರೂ ಸೂಕ್ತ ನೀತಿ ನಿರೂಪಣೆಯ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚಿನ ಆರೋಗ್ಯಕರ ಸ್ಪರ್ಧೆ ಇರುವಂತೆ ಸರಕಾರ ನೋಡಿಕೊಳ್ಳಬಹುದಿತ್ತ.

ಗಾನಾ ಬಜಾನಾ ಮಾಡಿ ಬಂದ ದೊಡ್ಡ ಸಂಸ್ಥೆಗಳು ಬಾಳಲಾಗದೇ ಬಾಗಿಲು ಹಾಕಿದ ನಂತರ ಮತ್ತೆ ಹೊಸ ಕಂಪನಿಗಳಿ ಈ ಕ್ಷೇತ್ರಕ್ಕೆ ಕಾಲಿಡದಿರುವುದಕ್ಕೆ ಹಲವು ಕಾರಣಗಳಿವೆ.

ಮೊದಲಿಗೆ ಹೇಳುವುದಾದರೆ ಇಲ್ಲಿನ ಅಕ ನಿರ್ವಹಣಾ ವೆಚ್ಚ ಬಲುಮುಖ್ಯ ಎನಿಸುತ್ತದೆ. ಭಾರತೀಯ ವಿಮಾನಯಾನ ವಲಯವು ಏವಿಯೇಷನ್ ಟರ್ಬೈನ್ ಫ್ಯೂಯಲ್ ಮೇಲಿನ ಹೆಚ್ಚಿನ ತೆರಿಗೆ (ಕೆಲವು ರಾಜ್ಯಗಳಲ್ಲಿ ೩೦% ವರೆಗೆ) ಮತ್ತು ದುಬಾರಿ ಶುಲ್ಕಗಳಿಂದ ಬಳಲುತ್ತಿದೆ. ಇದಿನ್ನೂ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಎರಡನೆಯದಾಗಿ ಕಳೆದ ದಶಕದಲ್ಲಿ, ಕಿಂಗ್‌ಫಿಶರ್ ಏರ್ಲೈನ್ಸ್, ಜೆಟ್ ಏರ್ವೇಸ್, ಏರ್ ಡೆಕ್ಕನ್ ಮತ್ತು ಗೋಏರ್‌ನಂತಹ ಸಂಸ್ಥೆಗಳು ಸುಸ್ತಿ ಸಾಲ, ಕಳಪೆ ನಿರ್ವಹಣೆ ಮತ್ತು ಅಕ ವೆಚ್ಚಗಳಿಂದಾಗಿ ದಿವಾಳಿಯಾದವು.

ಈ ಸಂಸ್ಥೆಗಳು ಮಾರುಕಟ್ಟೆಯಿಂದ ನಿರ್ಗಮಿಸಿದಾಗ, ಇಂಡಿಗೊ ತಕ್ಷಣವೇ ತಮ್ಮ ಮಾರುಕಟ್ಟೆ ಪಾಲು ಮತ್ತು ವಿಮಾನ ನಿಲ್ದಾಣದ ಸ್ಲಾಟ್‌ಗಳನ್ನು ಸ್ವಾನಪಡಿಸಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ಅದರ ಏಕಸ್ವಾಮ್ಯಕ್ಕೆ ಕಾರಣವಾಯಿತು. ಸರಕಾರ ಆಗ ಎಚ್ಚೆತ್ತುಕೊಳ್ಳಬೇಕಿತ್ತು.

ಇನ್ನು ಭಾರತದಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಪರಿಣಾಮಕಾರಿಯಾದ ದಿವಾಳಿತನ ಕಾನೂನುಗಳ ಕೊರತೆಯಿದೆ. ವಿಫಲವಾದ ವಿಮಾನಯಾನ ಸಂಸ್ಥೆಗಳು ವ್ಯವಸ್ಥಿತವಾಗಿ ಮುಚ್ಚಿಹೋಗುವ ಬದಲು, ಅಸ್ತವ್ಯಸ್ತವಾಗಿ ಪತನಗೊಂಡವು. ಇದು ಹೊಸ ರ್ಸ್ಪಗಳು ಮಾರುಕಟ್ಟೆ ಪ್ರವೇಶಿಸಲು ತೊಡಕಾಗಿದೆ.

ಕೊನೆಯದಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಮಾರುಕಟ್ಟೆಯ ಪ್ರಾಬಲ್ಯದ ದುರುಪಯೋಗವನ್ನು ತನಿಖೆ ಮಾಡಬಹುದಾದರೂ ಅದಕ್ಕೆ ಪೂರಕವಾಗಿ ಮಾರುಕಟ್ಟೆ ಪಾಲು ಮಿತಿಯಂತಹ ನಿಯಂತ್ರಣ ಕ್ರಮಗಳನ್ನು ಸರ್ಕಾರ ಜಾರಿಗೆ ತರದಿರುವುದು ಈ ಪರಿಸ್ಥಿತಿಗೆ ಕಾರಣ ಎನ್ನಬಹುದು.

ಒಟ್ಟಾರೆಯಾಗಿ, ಇಂಡಿಗೊ ಬಿಕ್ಕಟ್ಟು ಖಂಡಿತವಾಗಿಯೂ ವ್ಯವಸ್ಥೆಯ ಲೋಪದ ಜೊತೆಗೆ ಸರ್ಕಾರದ ನೀತಿ ನಿಶ್ಚಲತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಸರ್ಕಾರದ ನಿರ್ಲಕ್ಷ್ಯವೇ ಅಥವಾ ಒಂದು ಸಂಸ್ಥೆಯ ದುರಾಡಳಿತವೇ ಎಂಬುದು ಚರ್ಚಾಸ್ಪದವಾಗಿದ್ದರೂ, ಭಾರತದಂತಹ ಬೃಹತ್ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಮಾರುಕಟ್ಟೆಯಲ್ಲಿ ಹೆಚ್ಚು ದೃಢವಾದ ಮತ್ತು ಪೂರ್ವಭಾವಿ ನಿಯಂತ್ರಣದ ಅಗತ್ಯವಿದೆ ಎಂಬುದನ್ನು ಈ ಘಟನೆ ಒತ್ತಿ ಹೇಳಿದೆ.

-ಕೆ.ಎಸ್. ಜಗನ್ನಾಥ್, ಹಿರಿಯ ಪತ್ರಕರ್ತ

Related Posts

Leave a Reply

Your email address will not be published. Required fields are marked *