ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿದ್ದು, ವರದಿ ಪ್ರಕಾರ ದೇಶದ ಜಿಡಿಪಿ 2025-26ರಲ್ಲಿ ಶೇ. 7.4, 2026-27ರಲ್ಲಿ ಶೇ. 6.8-7.2ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದ ತಂಡವು ಆರ್ಥಿಕ ಸಮೀಕ್ಷೆಯ ವರದಿ ತಯಾರಿಸಿದೆ. ಆರ್ಥಿಕ ಮೂಲಭೂತ ಅಂಶಗಳು ವಿಫುಲವಾಗಿದ್ದು, ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ ಕೊಡುವುದರಿಂದ ಜಿಡಿಪಿ ಉತ್ತಮ ಬೆಳವಣಿಗೆ ಪಡೆಬಹುದು ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಬಜೆಟ್ ಮಂಡನೆಗೆ ಮೊದಲು ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಬೆಳವಣಿಗೆ ಹೇಗಿತ್ತು, ಮುಂಬರುವ ವರ್ಷದಲ್ಲಿ ಹೇಗಿರಲಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗುತ್ತದೆ. ಹಣಕಾಸು ಸಚಿವಾಲಯದಡಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಈ ಸಮೀಕ್ಷೆ ನಡೆಸುತ್ತಾರೆ.
ಜಿಡಿಪಿ, ಹಣದುಬ್ಬರದ ಟ್ರೆಂಡ್ ಹೇಗಿದೆ, ಹಣಕಾಸು ನೀತಿ ಹೇಗಿದ್ದರೆ ಅನುಕೂಲ, ರಫ್ತು, ಆಮದು ಇತ್ಯಾದಿ ಹೇಗಿವೆ ಮತ್ತು ಆರೋಗ್ಯ, ಶಿಕ್ಷಣ ಮತ್ತಿತರ ಸಾಮಾಜಿಕ ಸೂಚಕಗಳು ಹೇಗಿವೆ ಮುಂತಾದ ಅಂಶಗಳನ್ನೂ ಆರ್ಥಿಕ ಸಮೀಕ್ಷೆಯಲ್ಲಿ ಅವಲೋಕಿಸಲಾಗುತ್ತದೆ.
ಇಂದು ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ಪ್ರಸಕ್ತ ವರ್ಷದಲ್ಲಿ (2025-26) ಜಿಡಿಪಿ ಶೇ. 7.4 ಹೆಚ್ಚಬಹುದು ಎನ್ನಲಾಗಿದೆ. ಹಿಂದಿನ ವರ್ಷದ ಸಮೀಕ್ಷೆಯಲ್ಲಿ ಮಾಡಲಾದ ಅಂದಾಜಿಗಿಂತ ಇದು ಹೆಚ್ಚು. 2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಾರೆ. ಬಜೆಟ್ ಅಧಿವೇಶನ ಬುಧವಾರವೇ ಆರಂಭಗೊಂಡಿದೆ.


