ಭಾರತೀಯ ವಿದ್ಯಾರ್ಥಿ, ರಾಜಸ್ಥಾನದ ಅಲ್ವಾರ್‌ನ ಲಕ್ಷ್ಮಣಗಢದ ಕಫನ್ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ ಮೃತದೇಹ ರಷ್ಯಾದ ವೈಟ್ ನದಿಯ ಪಕ್ಕದಲ್ಲಿರುವ ಅಣೆಕಟ್ಟೆಯಲ್ಲಿ ಪತ್ತೆಯಾಗಿದೆ.
ರಷ್ಯಾದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಅಜಿತ್ ಸಿಂಗ್ 2023 ರಲ್ಲಿ ಎಂಬಿಬಿಎಸ್ ಕೋರ್ಸ್‌ಗಾಗಿ ಬಶ್ಕಿರ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ್ದರು. ಅಜಿತ್ ಕುಟುಂಬದವರು ಮಗ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸ ಪಡೆದುಕೊಳ್ಳಲಿ ಎಂಬ ಕನಸಿನೊಂದಿಗೆ ಕಷ್ಟಪಟ್ಟು ಹಣ ಒಟ್ಟುಗೂಡಿಸಿ ರಷ್ಯಾಗೆ ಕಳಿಸಿದ್ದರು. ಅಕ್ಟೋಬರ್ 19 ರಂದು ಉಫಾದಲ್ಲಿ ಕಾಣೆಯಾಗಿದ್ದರು. ಬೆಳಗ್ಗೆ 11 ಗಂಟೆಗೆ ಹಾಲು ಖರೀದಿಸಲು ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ಹೊರಟು ಹೋಗಿದ್ದವರು ವಾಪಸಾಗಿರಲಿಲ್ಲ ಎಂದು ಹೇಳಲಾಗಿದೆ.
ಚೌಧರಿ ಮೃತದೇಹ ವೈಟ್ ನದಿಯ ಪಕ್ಕದಲ್ಲಿರುವ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಲ್ವಾರ್ ಸರಸ್ ಡೈರಿ ಅಧ್ಯಕ್ಷ ನಿತಿನ್ ಸಾಂಗ್ವಾನ್ ತಿಳಿಸಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಗುರುವಾರ ಚೌಧರಿ ಅವರ ಕುಟುಂಬಕ್ಕೆ ಸಾವಿನ ಬಗ್ಗೆ ಮಾಹಿತಿ ಲಭಿಸಿದೆ. ವಿದ್ಯಾರ್ಥಿಯ ಸಾವಿನ ಬಗ್ಗೆ ವಿಶ್ವವಿದ್ಯಾಲಯ ಯಾವುದೇ ಹೇಳಿಕೆ ನೀಡಿಲ್ಲ.
19 ದಿನಗಳ ಹಿಂದೆ ನದಿ ದಂಡೆಯ ಬಳಿ ಚೌಧರಿ ಅವರ ಬಟ್ಟೆ, ಮೊಬೈಲ್ ಫೋನ್ ಮತ್ತು ಶೂಗಳು ಪತ್ತೆಯಾಗಿದ್ದವು ಎಂದು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಹೇಳಿದ್ದಾರೆ.ಶವವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ.


