ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ರಷ್ಯಾ ಸೇನೆ ಸೇರಲು ಬಯಸುತ್ತಿರುವ ಎಲ್ಲಾ ಭಾರತೀಯರು ಈ ಯೋಚನೆ ಬಿಟ್ಟು ಬಿಡಿ, ಇದು ತುಂಬಾ ಅಪಾಯಕಾರಿ ನಿರ್ಧಾರವಾಗುತ್ತದೆ ಎಂದು ವಿದೇಶ ಸಚಿವಾಲಯ ಎಚ್ಚರಿಕೆ ನೀಡಿದೆ.
ದೆಹಲಿ ಮತ್ತು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳೊಂದಿಗೆ ವಿಷಯ ಚರ್ಚಿಸಿ. ಈ ಪದ್ದತಿಯನ್ನ ಕೊನೆಗೊಳಿಸಬೇಕು. ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆ. ರಷ್ಯಾ ಸೇನೆಯಲ್ಲಿ ಸಿಲುಕಿರುವ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.
ಯಾವುದೇ ಆಮಿಷಗಳಿಗೆ ಬಲಿಯಾಗದೆ ರಷ್ಯಾ ಸೇನೆ ಸೇರುವ ಯೋಚನೆಯಿಂದ ದೂರಿವಿರಿ ಎಂದು ಸಚಿವಾಲಯ ಹೇಳಿದೆ. ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ನೆಲೆಸಿರುವ ಇಬ್ಬರು ಭಾರತೀಯರು. ಉದ್ಯೋಗದ ಆಮಿಷವೊಡ್ಡಿ ನಮ್ಮನ್ನು ರಷ್ಯಾಕ್ಕೆ ಕರೆತಂದು ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ನಿಯೋಜಿಸಲಾಗಿದೆ ಎಂದು ಹೇಳಿಕೊಂಡಿರುವುದು ಬೆಳಕಿಗೆ ಬಂದ ಬಳಿಕ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಆರು ತಿಂಗಳ ಹಿಂದೆ ಸಂದರ್ಶಕ ವೀಸಾದಲ್ಲಿ ಇಬ್ಬರು ಭಾರತೀಯರು ರಷ್ಯಾಕ್ಕೆ ಪ್ರಯಾಣಿಸಿದ್ದರು. ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಏಜೆಂಟ್ ತಮ್ಮನ್ನು ಯುದ್ಧಭೂಮಿಗೆ ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಈ ಪ್ರಕರಣ ಬಹಿರಂಗಗೊಂಡಿತ್ತು.
ಜಮ್ಮು ಮತ್ತು ಕಾಶ್ಮೀರದ ಯುವಕ, ತೆಲಂಗಾಣದ ಯುವಕ ಮತ್ತು ಕಲಬುರಗಿಯ ಮೂವರು ವ್ಯಾಗ್ನರ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾ ಗಡಿಯಲ್ಲಿ ಸಿಲುಕಿದ್ದರು. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ತಕ್ಷಣವೇ ರಕ್ಷಿಸಬೇಕು ಎಂದು ಮೊರೆಯಿಟ್ಟಿದ್ದರು. ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವೀಡಿಯೊದಲ್ಲಿ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದರು.
ನಾವು ಹೈಟೆಕ್ ವಂಚನೆಗೆ ಬಲಿಯಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್‌ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ಒತ್ತಾಯಿಸಲಾಗುತ್ತಿದೆ. ಸೇನೆಯ ಭದ್ರತಾ ಸಹಾಯಕ ಕೆಲಸದ ಭರವಸೆಯೊಂದಿಗೆ ನಾವು ಕಳೆದ ವರ್ಷ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಬಂದಿದ್ದೇವೆ. ನಂತರ ನಾವು ವಂಚನೆಗೆ ಒಳಗಾದ ವಿಚಾರ ತಿಳಿಯಿತು ಎಂದು ಹೇಳಿಕೊಂಡಿದ್ದರು.