ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ಭಾರತದ ಕಿರುಚಿತ್ರ ‘ಅನುಜಾ’ 2025ರ ಆಸ್ಕರ್ ಪ್ರಶಸ್ತಿಯ ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಸ್ಥಾನ ಪಡೆದಿದೆ.
97ನೇ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಲಿಸ್ಟ್ ಅನ್ನು ಬೋವೆನ್ ಯಾಂಗ್ ಹಾಗೂ ರಾಚೆಲ್ ಸೆನ್ನೋಟ್ ರಿವೀಲ್ ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯಿಂದ ಸುಮಾರು 180 ಸಿನಿಮಾಗಳು ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದ ನಾಮಿನೇಷನ್ ರೇಸ್ನಲ್ಲಿ ಇದ್ದವು. ಅದರಲ್ಲಿ ಐದು ಸಿನಿಮಾಗಳು ನಾಮಿನೇಟ್ ಆಗಿವೆ. ಅದರಲ್ಲಿ ಭಾರತದ ‘ಅನುಜಾ’ ಕೂಡ ಒಂದು.
‘ಅನುಜಾ’ ನಾಮಿನೇಷನ್ ಭಾರತದ ಈ ವರ್ಷದ ಆಸ್ಕರ್ ಪ್ರಶಸ್ತಿ ಕನಸನ್ನು ಜೀವಂತವಾಗಿಸಿದೆ. ‘ಅನುಜಾ’ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ, ಗುನೀತ್ ಮೊಂಗಾ ಹಾಗೂ ಮಿಂಡಿ ಕಲಿಂಗ್ ಇದ್ದಾರೆ. ಅಂದ್ಹಾಗೆ ‘ಅನುಜಾ’ ಆಸ್ಕರ್ಗೆ ನಾಮಿನೇಟ್ ಆಗುತ್ತಿರುವ ಗುನೀತ್ ಮೊಂಗಾ ಅವರ ಮೂರನೇ ಸಿನಿಮಾ. ಈ ಹಿಂದೆ ‘ದಿ ಎಲಿಫೆಂಟ್ ವಿಸ್ಪರೆರ್ಸ್’ ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತ್ತು. ಇದರ ಜೊತೆಗೆ ಇವರದ್ದೇ ಕಿರುಚಿತ್ರ ‘ಪ್ರಿರಿಯಡ್: ಎಂಡ್ ಆಫ್ ಸೆನ್ಟೆನ್ಸ್’ ನಾಮಿನೇಟ್ ಆಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿತ್ತು.
‘ಅನುಜಾ’ ಕಿರುಚಿತ್ರವನ್ನು ಆಡಮ್ ಜೆ. ಗ್ರೇವ್ಸ್ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರ ಆಸ್ಕರ್ಗೆ ನಾಮಿನೇಟ್ ಆಗುತ್ತಿದ್ದಂತೆ ಪ್ರಿಯಾಂಕಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕಿರುಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದು, ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಸಿನಿಮಾ ವಿಭಾಗಕ್ಕೆ ಆಯ್ಕೆ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.