ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ದೇಶಕ್ಕೆ ಬರುತ್ತಿರುವ ಭಾರತದ ಅಕ್ಕಿ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕದಲ್ಲಿ ಭಾರತದ ಅಕ್ಕಿ ಡಂಪ್ ಮಾಡುವುದು ಸರಿಯಲ್ಲ, ಈಗಾಗಲೇ ಅಕ್ಕಿಯ ಮೇಲೆ ಶೇ. 53 ಸುಂಕ ಇದೆ. ಇನ್ನೂ ಅಧಿಕ ಸುಂಕ ಹೇರಲು ಮುಂದಾಗಿದ್ದಾರೆ.
ಭಾರತದ ಹೆಚ್ಚಿನ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ಹೇರಿದೆ. ಅಕ್ಕಿ ಮೇಲೆ ಈಗಾಗಲೇ ಶೇ. 50-53ರಷ್ಟು ಸುಂಕ ಅಮೆರಿಕ ಹಾಕುತ್ತಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ನಿಷ್ಠರಾಗಿರುವ ಮತದಾರರಲ್ಲಿ ಅಮೆರಿಕನ್ ರೈತರೂ ಇದ್ದಾರೆ. ಹೀಗಾಗಿ ರೈತರಿಗೆ ಪೂರಕ ಕ್ರಮಗಳನ್ನು ಟ್ರಂಪ್ ಸರ್ಕಾರ ಕೈಗೊಳ್ಳುತ್ತಿದೆ. ಹೊರದೇಶಗಳಿಂದ ಅಕ್ಕಿ ಮತ್ತು ರಸಗೊಬ್ಬರ ಬರುತ್ತಿರುವುದು ಅಮೆರಿಕದ ರೈತರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನಲಾಗಿದೆ.
ಭಾರತ, ಥಾಯ್ಲೆಂಡ್ ಮುಂತಾದ ದೇಶಗಳಿಂದ ಅಮೆರಿಕಕ್ಕೆ ಅಕ್ಕಿ ಬರುತ್ತದೆ. ಕೆನಡಾದಿಂದ ರಸಗೊಬ್ಬರ ಬರುತ್ತದೆ. ಇವೆಲ್ಲದಕ್ಕೂ ಸುಂಕ ಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕನ್ ರೈತರಿಗೆ ನೆರವಾಗಲು 12 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದ್ದಾರೆ. 2024-25ರಲ್ಲಿ ಅಮೆರಿಕಕ್ಕೆ ಭಾರತ 392 ಮಿಲಿಯನ್ ಡಾಲರ್ ಮೌಲ್ಯದ, 2.74 ಲಕ್ಷ ಮೆಟ್ರಿಕ್ ಟನ್ ಅಕ್ಕಿ ರಫ್ತು ಮಾಡಿದೆ. ಭಾರತದ ಒಟ್ಟಾರೆ ರಫ್ತಿನಲ್ಲಿ ಇದು ಶೇ.3. ಹೀಗಾಗಿ ಅಮೆರಿಕಕ್ಕೆ ಅಕ್ಕಿ ರಫ್ತು ನಿಂತು ಹೋದರೆ ಭಾರತಕ್ಕೆ ದೊಡ್ಡ ತೊಂದರೆ ಎದುರಾಗುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕಕ್ಕೆ ರಫ್ತಾಗುವ ಅಕ್ಕಿಯಲ್ಲಿ ಬಾಸ್ಮತಿಯೇ ಶೇ. 86ರಷ್ಟಿದೆ. ಭಾರತದ ಬಾಸ್ಮತಿ ಅಕ್ಕಿಗೆ ಅಮೆರಿಕ 4ನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಭಾರತದ ಸಾಮಾನ್ಯ ಅಕ್ಕಿಗೆ ಅಮೆರಿಕ 24ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಬಾಸ್ಮತಿ ಅಕ್ಕಿ ಬಹಳ ವಿಶೇಷ ಗುಣ ಹೊಂದಿದೆ. ಸುವಾಸನೆ, ಆಕಾರ, ರುಚಿಗೆ ಸರಿದೂಗುವ ಅಕ್ಕಿ ಅಮೆರಿಕದಲ್ಲಿ ಇಲ್ಲ. ಹೀಗಾಗಿ, ಭಾರತದ ಬಾಸ್ಮತಿ ಅಕ್ಕಿಗೆ ಬಹಳ ಬೇಡಿಕೆ ಇದೆ. ಟ್ರಂಪ್ ಅಧಿಕ ಸುಂಕ ಹಾಕಿದರೂ ಬಾಸ್ಮತಿ ಅಕ್ಕಿಗಿರುವ ಬೇಡಿಕೆ ಕಡಿಮೆ ಆಗದಿರ ಬಹುದು. ಹೆಚ್ಚಿನ ಸುಂಕದ ಹೊರೆಯನ್ನು ಅಮೆರಿಕದ ಗ್ರಾಹಕರೇ ಹೊರಬೇಕಾಗುತದೆ ಎಂಬುದು ವಾಸ್ತವ.


