ಲಕ್ನೋ: ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ರಾಫೆಲ್ ಮತ್ತು ಸುಖೋಯ್ ಯುದ್ಧ ವಿಮಾನಗಳನ್ನು ಕತ್ತಲಲ್ಲಿ ಲ್ಯಾಂಡಿಂಗ್ ಮಾಡುವ ಯಶಸ್ವಿ ತರಬೇತಿ ನಡೆಸಿದೆ.
ಉತ್ತರ ಪ್ರದೇಶದ ಶಹಜಾನ್ ಪುರದ ಎಕ್ಸ್ ಪ್ರೆಸ್ ವೇನಲ್ಲಿ ಶುಕ್ರವಾರ ರಾತ್ರಿ ಚಂದಿರನ ಬೆಳಕು ಹೊರತುಪಡಿಸಿ ಯಾವುದೇ ಬೆಳಕಿನ ಸಹಾಯವಿಲ್ಲದೇ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಲಾಯಿತು. ಈ ಮೂಲಕ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಜಮ್ಮು ಕಾಶ್ಮೀರದ ಪೆಹಲ್ಗಾವ್ ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಈ ಪ್ರಯೋಗ ಹಮ್ಮಿಕೊಂಡಿತ್ತು. ಇದರೊಂದಿಗೆ ಭಾರತ ಹಗಲು ಮತ್ತು ರಾತ್ರಿ ಯಾವುದೇ ದಾಳಿ ನಡೆಸಬಲ್ಲ ಹಾಗೂ ಯಾವುದೇ ಸಂದರ್ಭ ಎದುರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿತು.
ಭಾರತದ ಬತ್ತಳಿಕೆಯಲ್ಲಿರುವ ಪ್ರಮುಖ ಯುದ್ಧ ವಿಮಾನಗಳಾದ ರಾಫೆಲ್, ಸುಖೋಯ್-30, ಮಿಗ್-29, ಮೀರಜ್-2000, ಜಾಗ್ವರ್, ಎನ್-32 ಸರಕು ಸಾಗಾಣೆ ವಿಮಾನ, ಸೂಪರ್ ಹರ್ಕೂಲಸ್ ಮುಂತಾದ ವಿಮಾನಗಳನ್ನು ಯಾವುದೇ ಬೆಳಕಿನ ಸಹಾಯವಿಲ್ಲದೇ ಯಶಸ್ವಿಯಾಗಿ ಲ್ಯಾಂಡ್ ಮಾಡಿಸಲಾಯಿತು.
ಶುಕ್ರವಾರ ರಾತ್ರಿ 9 ಗಂಟೆಯಿಂದ 10ಗಂಟೆಯ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಗಂಗಾ ಎಕ್ಸ್ ಪ್ರೆಸ್ ವೇನ 3.5 ಕಿ.ಮೀ. ಉದ್ದದ ರಸ್ತೆ ನಡುವೆ ಯುದ್ಧ ವಿಮಾನಗಳನ್ನು ಕೆಳಗಿಸಲಾಯಿತು.