ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನವು ಜಮ್ಮುವಿನ ಅಖ್ನೂರ್, ಕನಾಚಕ್, ಪರ್ಗ್ವಾಲ್, ರಾಮನಗರ ವಲಯಗಳಲ್ಲಿ ಸ್ಫೋಟ ನಡೆಸಿದೆ. ಈ ಪ್ರದೇಶಗಳಲ್ಲಿ ಫಿರಂಗಿ ಶೆಲ್ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಗಡಿ ಭಾಗದಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದ್ದು, ಆ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ ನಡೆದ 2 ಗಂಟೆ 45 ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ.
ಉಧಂಪುರದಲ್ಲಿ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆ ಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಕಾಣಿಸಸುವ ಜೊತೆಗೆ ಸ್ಫೋಟಗಳು ಕೇಳಿಬಂದಿವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸ್ಫೋಟಗಳು ಕೇಳಿಬಂದವು. ರಾಜಸ್ಥಾನದ ಬಾರ್ಮರ್ ನಗರ, ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸ ಲಾಗಿದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬ್ಲ್ಯಾಕ್‌ಔಟ್ ಮಾಡಲಾಗಿದೆ.
ಜಮ್ಮು- ಕಾಶ್ಮೀರದ ನಾಗ್ರೋಟಾದಲ್ಲಿ ಭಾರತೀಯ ಸೇನೆ ಮತ್ತು ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ನಾಗ್ರೋಟಾದ ಸೇನಾ ಘಟಕದಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಹಾಗೂ ಭದ್ರತಾ ಪಡೆಗಳಿಂದ ಶೋಧ ಕಾರ್ಯಾ ಚರಣೆ ನಡೆಯುತ್ತಿದೆ.
ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ನಗ್ರೋಟಾ ಮಿಲಿಟರಿ ಠಾಣೆಯ ಕಾವಲುಗಾರ ಗುಂಡು ಹಾರಿಸಿ ದ್ದಾರೆ. ಶಂಕಿತ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆದಿದೆ. ಕಾವಲುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನುಸುಳುಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಭಾರತೀಯ ಸೇನೆಯ ತಿಳಿಸಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ ಕದನ ವಿರಾಮ ಒಪ್ಪಂದ ಆಗಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.