ಪಹಲ್ಗಾಂನಲ್ಲಿ ಉಗ್ರರ ದಾಳಿಯ ಬಳಿಕ ಭಾರತ-ಪಾಕಿಸ್ತಾನದ ಸಂಬಂಧ ಹದಗೆಡುತ್ತಿದ್ದು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕಿಡಿ ಕಾರಿದೆ. ಪಾಕಿಸ್ತಾನವನ್ನು ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ಧೂರ್ತ ದೇಶ ಎಂದು ಹೇಳಿದೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ ‘ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್ ನೆಟ್‌ವರ್ಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಕಾಯಂ ಉಪ ಪ್ರತಿನಿಧಿ, ರಾಯಭಾರಿ ಯೋಜನಾ ಪಟೇಲ್, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಿ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಪಾಕಿಸ್ತಾನದ ನಡೆಯನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಪಾಕ್‌ನ ನೈಜ ಬಣ್ಣ ಬಯಲಾಗಿದೆ. ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ರಾಕ್ಷಸ ರಾಷ್ಟ್ರ ಎಂಬುದು ಈ ಮೂಲಕ ಬಹಿರಂಗಗೊಂಡಿದೆ ಎಂದು ಹೇಳಿದ್ದಾರೆ.
ಪಹಲ್ಗಾಂ ದಾಳಿಯ ನಂತರ ಭಾರತಕ್ಕೆ ಲಭಿಸಿದ ಬೆಂಬಲ ಮತ್ತು ಒಗ್ಗಟ್ಟಿಗೆ ಜಾಗತಿಕ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದ ಯೋಜನಾ ಪಟೇಲ್, ಇದು ಅಂತಾರಾಷ್ಟ್ರೀಯ ಸಮುದಾಯದ ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿ ವಿಚಾರದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪತ್ರ ಬರೆದು ಮನವಿ ಮಾಡಿದ್ದಾರೆ. ಏಕತೆ ಮತ್ತು ಒಗ್ಗಟ್ಟು ಅಗತ್ಯವಾದ ಈ ಕ್ಷಣದಲ್ಲಿ ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ಅಧಿವೇಶನ ಕರೆಯುವುದು ಬಹು ಮುಖ್ಯ ಎಂದು ಖರ್ಗೆ ಹೇಳಿದ್ದು, ಈ ನಿರ್ಣಾಯಕ ಸಮಯದಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತ ಯಾವಾಗಲೂ ಒಟ್ಟಾಗಿ ನಿಲ್ಲುತ್ತದೆ ಎಂದು ತೋರಿಸಬೇಕು. ಹೀಗಾಗಿ ಅಧಿವೇಶನ ಕರೆಯಬೇಕು’ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.