ನಾಗರಿಕರ ಮೇಲಿನ ಭಯೋತ್ಪಾದನಾ ದಾಳಿ ಮಾನವೀಯತೆಗೆ ವಿರುದ್ಧವಾಗಿದ್ದು, ಜಾಗತಿಕ ಪಿಡುಗು ಆಗಿರುವ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತದ ಜೊತೆ ರಷ್ಯಾ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಹಲವು ರಾಜತಾಂತ್ರಿಕ ಮಾತುಕತೆ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೆಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ನಾಗರಿಕರ ಮೇಲಿನ ದಾಳಿ ಮಾನವೀಯತೆಗೆ ವಿರುದ್ಧವಾಗಿದೆ. ಈ ವಿಷಯದಲ್ಲಿ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ರಷ್ಯಾ ಸಹಕಾರ ನೀಡಲಿದೆ ಎಂದು ಅವರು ನುಡಿದರು.
ರಕ್ಷಣೆ, ವ್ಯಾಪಾರ ಸೇರಿದಂತೆ 2030ರವರೆಗೆ ಹಲವು ಒಪ್ಪಂದಗಳಿಗೆ ರಷ್ಯಾ ಜೊತೆ ಒಪ್ಪ ಮಾಡಿಕೊಳ್ಳಲಾಗಿದೆ. ಎರಡೂ ದೇಶಗಳ ನಡುವಿನ ದಶಕಗಳ ಸೌಹಾರ್ದ ಸಂಬಂಧ ಮುಂದುವರಿಯಲಿದೆ ಎಂದು ಅವರು ಹೇಳಿದರು.
ನಂತರ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್ ಭಾರತದ ಜೊತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, 100 ಬಿಲಿಯನ್ ಡಾಲರ್ ವ್ಯಾಪಾರ ವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಭಾರತಕ್ಕೆ ತೈಲ ಪೂರೈಕೆ ಯಾವುದೇ ಅಡೆತಡೆ ಇಲ್ಲದೇ ಮುಂದುವರಿಯಲಿದೆ. ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.


