Menu

ಸೂಚನೆ ನೀಡದೆ ನೀರು ಬಿಟ್ಟ ಭಾರತ: ಪಾಕಿಸ್ತಾನದಲ್ಲಿ ಫ್ಲಡ್‌ ಅಲರ್ಟ್‌

ಒಂದು ದಿನ ಪೂರ್ತಿ (ಸೋಮವಾರ) ಪಾಕಿಸ್ತಾನಕ್ಕೆ ನೀರು ಬಂದ್‌ ಮಾಡಿದ್ದ ಭಾರತ ಮಂಗಳವಾರ ಯಾವುದೇ ಸೂಚನೆ ನೀಡದೆ ಡ್ಯಾಮ್‌ಗಳಿಂದ ನೀರನ್ನು ಬಿಟ್ಟಿದೆ. ಇದರಿಂದಾಗಿ ಚೆನಾಬ್‌ ನದಿ ನೀರಿನ ಮಟ್ಟ ಏರಿದ್ದು, ಪಾಕಿಸ್ತಾನದ ಕೆಲವು ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ  ನೀಡಲಾಗಿದೆ.

24 ಗಂಟೆನೀರನ್ನು ತಡೆಹಿಡಿದ ನಂತರ, ಭಾರತವು ಇದ್ದಕ್ಕಿದ್ದಂತೆ ಚೆನಾಬ್ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಪಾಕಿಸ್ತಾನ ದಲ್ಲಿ ಪ್ರವಾಹದ ಸಂಭವ ಹೆಚ್ಚಿದೆ ಎಂದು ಅಲ್ಲಿನ ಎಂದು ಹಮ್‌ ವೆಬ್‌ಸೈಟ್‌ ವರದಿ ಪ್ರಕಟಿಸಿದೆ.

ನದಿ ಬಹುತೇಕ ಒಣಗಿ ಹೋದ ಕೆಲವೇ ಗಂಟೆಗಳಲ್ಲಿ ಯಾವುದೇ ಸೂಚನೆ ನೀಡದೇ ನೀರು ಬಿಡುಗಡೆ ಮಾಡಿದ್ದರಿಂದ ಹೆಡ್ ಮರಾಲಾದಲ್ಲಿ ನೀರಿನ ಹರಿವು 28,000 ಕ್ಯೂಸೆಕ್‌ಗಳಿಗೆ ಏರಿದೆ. ಸಿಯಾಲ್‌ಕೋಟ್, ಗುಜರಾತ್ ಮತ್ತು ಹೆಡ್ ಖಾದಿರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಪರಿಶೀಲಿಸಲು ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ ಚೆನಾಬ್ ನದಿಯ ಒಳಹರಿವು ಮತ್ತು ಹೊರಹರಿವಿನ ನೈಜ-ಸಮಯದ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದೆ. ಭಾರತದ ಅನಿಯಮಿತ ಮತ್ತು ರಾಜಕೀಯ ಪ್ರೇರಿತ ನೀರು ಬಿಡುಗಡೆಯಿಂದಾಗಿ ಮುಂಬರುವ ಗಂಟೆಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಏರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ನದಿ ತೀರದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಪಾಕಿಸ್ತಾನದ ಜಿಲ್ಲಾಡಳಿತಗಳು ಸೂಚಿಸಿವೆ.

ಪಾಕಿಸ್ತಾನಕ್ಕೆ ಭಾರತ ಒಂದು ಹನಿ ನೀರೂ ಕೂಡ ಬಿಟ್ಟಿರಲಿಲ್ಲ, ಬಾಗ್ಲಿಹಾರ್ ಅಣೆಕಟ್ಟಿನಲ್ಲಿ ಇದ್ದ ನೀರನ್ನು ಭಾರತ ತನ್ನ ಜಲವಿದ್ಯುತ್‌ ಯೋಜನೆ ಕಡೆಗೆ ವರ್ಗಾಯಿ ಸಿತ್ತು. ಇದರಿಂದಾಗಿ ಚೆನಾಬ್‌ ನದಿ ಸಂಪೂರ್ಣ ಒಣಗಿ ಹೋಗಿತ್ತು. ಜನರು ಕಾಲ್ನಡಿಗೆಯಲ್ಲಿಯೇ ಚೆನಾಬ್‌ ನದಿಯನ್ನು ದಾಟುತ್ತಿರುವ ವೀಡಿಯೊಗಳು ಪ್ರಸಾರ ವಾಗಿದ್ದವು. ಪಾಕಿಸ್ತಾನ ಕೂಡ ಚೆನಾಬ್‌ ನದಿ ನೀರು ಬತ್ತಿ ಹೋಗಿದ್ದರ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

ಭಾರತ ಈ ಪ್ರದೇಶದಲ್ಲಿರುವ ತನ್ನ ಎಲ್ಲಾ ಅಣೆಕಟ್ಟೆಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿದೆ. ಅಣೆಕಟ್ಟೆಗಳಲ್ಲಿ ತುಂಬಿರುವ ಹೂಳುಗಳನ್ನು ತೆಗೆಯುವ ಕಾಮಗಾರಿ ಕೂಡ ನಡೆಯುತ್ತಿದೆ. ಹೀಗಾಗಿ ಪಾಕಿಸ್ತಾನದ ಕಡೆಗೆ ದೊಡ್ಡ ಪ್ರಮಾಣದಲ್ಲಿ ಕೆಸರು ನೀರು ಹರಿದು ಹೋಗುತ್ತಿದ್ದು, ಕೃಷಿ ಭೂಮಿಗೆ ಸಂಬಂಧಿಸಿದಂತೆ ಆತಂಕಕ್ಕೆ ಕಾರಣವಾಗಿದೆ ಎಂದು ಪಾಕಿಸ್ತಾನದ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *