ದೇಶಾದ್ಯಂತ ನಾಳೆ ಅಂದರೆ ಮೇ 7ರಂದು ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.
ನಾಗರಿಕರ ರಕ್ಷಣೆಯ ಸಂಬಂಧ ಮೇ 7ರಂದು ದೇಶಾದ್ಯಂತ ಅಣಕು ಪ್ರದರ್ಶನ ನಡೆಸಬೇಕು. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನೀಡಿರುವ ಆದೇಶದಲ್ಲಿ ಹೇಳಿದೆ. ಹೀಗಾಗಿ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಾಳೆ ನಡೆಯಲಿದೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ ಎನ್ನಲಾಗಿದೆ. ಎರಡೂ ದೇಶಗಳು ಯುದ್ಧೋಪಕರಣಗಳ ತಾಲೀಮು ನಡೆಸಿ ಬಲಾಬಲ ಪ್ರದರ್ಶಿಸುತ್ತಿವೆ. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮೇ 7ರ ಬುಧವಾರ ಸಮಗ್ರ ನಾಗರಿಕ ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸು ವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಅಗತ್ಯ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿಯು ಈ ಕವಾಯತಿನಲ್ಲಿ ಸೇರಿವೆ. ವೈಮಾನಿಕ ದಾಳಿಗಳು ಅಥವಾ ತುರ್ತು ಸಂದರ್ಭಗಳಲ್ಲಿ ಸ್ವ ರಕ್ಷಣೆ ಹೇಗೆಂದು ನಾಗರಿಕರನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ. ರಾಷ್ಟ್ರವ್ಯಾಪಿ ಕವಾಯತನ್ನು ಪರಿಣಾಮಕಾರಿಗೊಳಿಸಲು ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಯ ಸಂಘಟಿತ ಭಾಗವಹಿಸುವಿಕೆಯ ಮಹತ್ವ ಪಡೆದಿದೆ ಎಂದು ಗೃಹ ಸಚಿವಾಲಯ ಒತ್ತಿ ಹೇಳಿದೆ. ಇದೇ ರೀತಿಯ ರಕ್ಷಣಾ ಕವಾಯತು 1971ರಲ್ಲಿ ನಡೆದಿತ್ತು, ಆ ವರ್ಷ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾಗಿತ್ತು.