ಸರ್ವಾಂಗೀಣ ;ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ 2 ವಿಕೆಟ್ ಗಳ ರೋಚಕ ಜಯ ಸಾಧಿಸಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ.
ಅಡಿಲೇಡ್ ನ ಓವಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವನ್ನು 9 ವಿಕೆಟ್ ಗೆ 264 ರನ್ ಗೆ ನಿಯಂತ್ರಿಸಿದ ಆಸ್ಟ್ರೇಲಿಯಾ ತಂಡ 46.2 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತದ ಬೌಲರ್ ಗಳ ದಾಳಿಗೆ ಆಸ್ಟ್ರೇಲಿಯಾ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಆರಂಭಿಕ ಮ್ಯಾಥ್ಯೂ ಶಾರ್ಟ್ ಮತ್ತು ಕೂಪರ್ ಕಾನ್ಲೆ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು.
ಶಾರ್ಟ್ 78 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 74 ರನ್ ಬಾರಿಸಿದರೆ, ಕೂಪರ್ 53 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 61 ರನ್ ಗಳಿಸಿದರು. ಮ್ಯಾಥ್ಯೂ ಓವನ್ (36) ಮತ್ತು ಮ್ಯಾಟ್ ರೇನ್ ಶಾ (30) ಆಧರಿಸಿದರು.
ಭಾರತದ ಪರ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರೂ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಲು ವಿಫಲರಾದರು.
ರೋಹಿತ್, ಅಯ್ಯರ್ ಆಸರೆ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ರೋಹಿತ್ ಶರ್ಮ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ 9 ವಿಕೆಟ್ ಗೆ 264 ರನ್ ಪೇರಿಸಿತು.
ನಿವೃತ್ತಿ ಹೊಸ್ತಿಲಲ್ಲಿರುವ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ ದಾಖಲೆ ಬರೆದರೆ, ರೋಹಿತ್ ಶರ್ಮ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲೂ ಸೊನ್ನೆ ಔಟಾಗಿ ಆಘಾತಕ್ಕೆ ಒಳಗಾದರು. ಕ್ಸೇವಿಯರ್ ಬ್ರಾಟ್ ಲೆಟ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದ ಕೊಹ್ಲಿ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು.
ವಿರಾಟ್ ಕೊಹ್ಲಿ ಜೊತೆ ನಿವೃತ್ತಿಯ ಹೊಸ್ತಿಲಲ್ಲಿರುವ ರೋಹಿತ್ ಶರ್ಮ 97 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 73 ರನ್ ಬಾರಿಸಿ ಔಟಾದರೆ, ಶ್ರೇಯಸ್ ಅಯ್ಯರ್ 77 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 61 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 118 ರನ್ ಜೊತೆಯಾಟ ನಿಭಾಯಿಸಿದರು. ಅಕ್ಸರ್ ಪಟೇಲ್ (44) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ಕೊಹ್ಲಿ ಜೊತೆ ನಾಯಕ ಶುಭಮನ್ ಗಿಲ್ (9) ಕೂಡ ವಿಫಲರಾಗಿ ನಿರಾಸೆ ಮೂಡಿಸಿದರು. ಆಸ್ಟ್ರೇಲಿಯಾದ ಮಾರಕ ದಾಳಿಗೆ ತತ್ತರಿಸಿ ಮಧ್ಯಮ ಕ್ರಮಾಂಕದಲ್ಲಿ ಮತ್ತೆ ಕುಸಿತ ಅನುಭವಿಸಿ ಕಳಪೆ ಮೊತ್ತಕ್ಕೆ ಔಟಾಗುವ ಭೀತಿಯಲ್ಲಿತ್ತು. ಆದರೆ ಹರ್ಷಿತ್ ರಾಣ 18 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 24 ರನ್ ಬಾರಿಸಿ ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು.
ಆಸ್ಟ್ರೇಲಿಯಾ ಪರ ಆಡಂ ಜಾಂಪಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಕ್ಸೇವಿಯರ್ ಬ್ರಾಟ್ ಲೆಟ್ 3 ವಿಕೆಟ್ ಪಡೆದರು.