ಅಫ್ಘಾನಿಸ್ತಾನದಲ್ಲಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 800 ದಾಟಿದ್ದರೆ. 2,500 ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಭಾರತವು ಆ ರಾಷ್ಟ್ರಕ್ಕೆ ನೆರವಿನ ಹಸ್ತ ಚಾಚಿದೆ.
ಭೂಕಂಪದಿಂದ ಕುಸಿದಿರುವ ಮನೆಗಳ ಅವಶೇಷಗಳಡಿ ಹೂತುಹೋಗಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ವೈಮಾನಿಕ ನೆರವು ಪಡಡೆ ಕೂಡ ಕಾರ್ಯೋನ್ಮುಖವಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ದುರಂತದಲ್ಲಿ ನಾಗರಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಫ್ಘಾನಿಸ್ತಾನದ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಭಾರತವು ಡೇರೆಗಳು ಮತ್ತು ಆಹಾರ ಸಾಮಗ್ರಿಗಳನ್ನು ರವಾನಿಸಿದೆ. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ನೆರವು ನೀಡಲಾಗುವುದು ಎಂದಿದ್ದಾರೆ.
ಭಾರತದಿಂದ 1000 ಕುಟುಂಬಗಳಿಗೆ ಡೇರೆ ಕಾಬೂಲ್ ತಲುಪಿವೆ. ಭಾರತೀಯ ಮಿಷನ್ 15 ಟನ್ ಆಹಾರ ಸಾಮಗ್ರಿಗಳನ್ನು ತಕ್ಷಣವೇ ಕಾಬೂಲ್‌ನಿಂದ ಕುನಾರ್‌ಗೆ ಸಾಗಿಸುತ್ತಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.
ಈ ಭೂಕಂಪದಿಂದ ಪಾಕಿಸ್ತಾನದ ಗಡಿಯಲ್ಲಿರುವ ಕುನಾರ್ ಪ್ರಾಂತ್ಯದಲ್ಲಿ ಭೀಕರವಾದ ವಿನಾಶವುಂಟಾಗಿದೆ. ಪಾಕಿಸ್ತಾನದಲ್ಲೂ ಹಾನಿಯಾಗಿದೆ. ಭೂಕಂಪದ ಕೇಂದ್ರಬಿಂದು ಜಲಾಲಾಬಾದ್‌ನಿಂದ 27 ಕಿಲೋಮೀಟರ್ ದೂರದಲ್ಲಿತ್ತು. ಕುನಾರ್ ಪ್ರಾಂತ್ಯದಲ್ಲಿ ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಪ್ರದೇಶಗಳು ಅತಿ ಹೆಚ್ಚು ಹಾನಿಗೊಳಗಾಗಿವೆ. ಇಡೀ ಹಳ್ಳಿಗಳು ಕುಸಿದಿವೆ. ಭೂಕುಸಿತಗಳು ಪ್ರಮುಖ ಮಾರ್ಗಗಳು ಮುಚ್ಚಿ ಹೋಗಿವೆ, ಸಂವಹನ ತೊಡಕು ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳಿಗೆ ಹಿನ್ನಡೆಯುಂಟು ಮಾಡಿದೆ.