ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಬ ಅಧಿಕಾರಿಯನ್ನು ‘ಪರ್ಸನಾ ನಾನ್ ಗ್ರಾಟಾ’ (ಅಪೇಕ್ಷಿತವಲ್ಲದ ವ್ಯಕ್ತಿ) ಎಂದು ಘೋಷಿಸಿ ಕೇಂದ್ರ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ.
ಅಧಿಕಾರಿಯು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದಡಿ 24 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಹೇಳಿದ್ದು, ಈ ಕ್ರಮವು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಪಾಕಿಸ್ತಾನಿ ಅಧಿಕಾರಿಯು ರಾಜತಾಂತ್ರಿಕ ಮಾನದಂಡಗಳಿಗೆ ವಿರುದ್ಧವಾದ ಕಾರ್ಯಗಳಲ್ಲಿ ತೊಡಗಿದ್ದಾನೆ. ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಈ ವ್ಯಕ್ತಿಯ ಚಟುವಟಿಕೆಗಳು, ರಾಜತಾಂತ್ರಿಕ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಆರೋಪಿಸಿದೆ. ಈ ಸಂಬಂಧ ವಿದೇಶಾಂಗ ಸಚಿವಾ ಲಯವು ಔಪಚಾರಿಕ ಪ್ರತಿಭಟನಾ ಪತ್ರ (ಡೆಮಾರ್ಚೆ) ಬಿಡುಗಡೆ ಮಾಡಿದ್ದು, ರಾಜತಾಂತ್ರಿಕ ಮಾನದಂಡಗಳ ಉಲ್ಲಂಘನೆಯನ್ನು ಭಾರತ ಸಹಿಸುವುದಿಲ್ಲ. ಅಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆಯೂ ಭಾರತವು ಹಲವಾರು ಬಾರಿ ಪಾಕಿಸ್ತಾನದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದೆ. ಈ ಬಾರಿ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿ ಯಾವ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬುದರ ಬಗ್ಗೆ ಸರ್ಕಾರವು ಮಾಹಿತಿ ಬಹಿರಂಗಪಡಿಸಿಲ್ಲ.