ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ 4 ವಿಕೆಟ್ ಗಳಿಂದ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ದುಬೈನಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ ಗಳಲ್ಲಿ 264 ರನ್ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 48.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಣ ಎರಡನೇ ಸೆಮಿಫೈನಲ್ ವಿಜೇತರನ್ನು ಭಾರತ ತಂಡ ಎದುರಿಸಲಿದೆ.
ಭಾರತ ತಂಡ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 28 ರನ ಗಳಿಸಿದ ರೋಹಿತ್ ಶರ್ಮ ಸೇರಿದಂತೆ 43 ರನ್ ಗೆ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ ಗೆ 99 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ಜವಾಬ್ದಾರಿಯುತ್ತ ಪ್ರದರ್ಶನ ನೀಡಿದ ಕೊಹ್ಲಿ 98 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 84 ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ 62 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 45 ರನ್ ಬಾರಿಸಿ ಔಟಾದರು. ಅಕ್ಸರ್ ಪಟೇಲ್ ಸಿಡಿಲಬ್ಬರದ ಆಟವಾಡಿ 30 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 27 ರನ್ ಗಳಿಸಿದರು.
ಕೊನೆಯಲ್ಲಿ ಮಹತ್ವದ ಆಟವಾಡಿದ ಕೆಎಲ್ ರಾಹುಲ್ 34 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 42 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರೆ, ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 28 ರನ್ ಚಚ್ಚಿದರು. ಆಸ್ಟ್ರೇಲಿಯಾ ಪರ ಆಡಂ ಜಂಪಾ ಮತ್ತು ನಾಥನ್ ಎಲ್ಸ್ ತಲಾ 2 ವಿಕೆಟ್ ಪಡೆದರು.
ಸ್ಮಿತ್ ಆಸರೆ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಭಾರತದ ಶಿಸ್ತಿನ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ಕಲೆಹಾಕುವ ಅವಕಾಶ ಕಳೆದುಕೊಂಡಿತು. ಆದರೆ ನಾಯಕ ಸ್ಟೀವನ್ ಸ್ಮಿತ್ ಮತ್ತು ಅಲೆಕ್ಸ ಕ್ಯಾರಿ ಅರ್ಧಶತಕಗಳ ನೆರವಿನಿಂದ ತಂಡ ಪೈಪೋಟಿಯ ಮೊತ್ತ ಪೇರಿಸಲು ನೆರವಾದರು.
ಸ್ಟೀವನ್ ಸ್ಮಿತ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 73 ರನ್ ಗಳಿಸಿದರೆ, ಕ್ಯಾರಿ 57 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 61 ರನ್ ಚಚ್ಚಿದರು.
ಭಾರತದ ಪರ ಮೊಹಮದ್ ಶಮಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದರು.