ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಾಯಕ ಮುಹಮ್ಮದ್ ಯೂನಸ್ ಭಾರತದ ಈಶಾನ್ಯ ರಾಜ್ಯಗಳಿಗೆ ಚೀನಾದ ಆರ್ಥಿಕ ಪ್ರವೇಶವನ್ನು ಪ್ರತಿಪಾದಿಸಿದ ಕೆಲವು ದಿನಗಳ ನಂತರ, ಭಾರತವು ತನ್ನ ಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತಿಗೆ ಪ್ರಮುಖ ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿದೆ.
ಬಾಂಗ್ಲಾದೇಶಕ್ಕೆ ನೀಡಲಾದ ನಿರ್ಣಾಯಕ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯವನ್ನು ಸರ್ಕಾರ ರದ್ದುಗೊಳಿಸಿದೆ. ಭಾರತ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತೀಯ ಭೂ ಕಸ್ಟಮ್ಸ್ ಸ್ಟೇಷನ್‌ಗಳು (ಎಲ್ ಸಿಎಸ್ ಗಳು), ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ಸಾಗಿಸಲು ಅವಕಾಶ ಮಾಡಿಕೊಟ್ಟಿತ್ತು.
ಕಳೆದ ಜೂನ್ 2020ರಲ್ಲಿ ಪರಿಚಯಿಸಲಾದ ಈ ಸೌಲಭ್ಯವು ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ನಂತಹ ರಾಷ್ಟ್ರಗಳಿಗೆ ಭಾರತದ ಮೂಲಕ ಬಾಂಗ್ಲಾದೇಶದ ಸರಕುಗಳ ರಫ್ತಿಗೆ ಸುಗಮ ಮಾರ್ಗವನ್ನು ಒದಗಿಸಿತ್ತು. ಇದೀಗ ಏಪ್ರಿಲ್ 8ರಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹೊರಡಿಸಿದ ಸುತ್ತೋಲೆಯ ಮೂಲಕ ಈ ನಿರ್ಧಾರವನ್ನು ಅಧಿಕೃತಗೊಳಿಸಲಾಗಿದೆ.
ಬಾಂಗ್ಲಾದೇಶದಿಂದ ಮೂರನೇ ದೇಶಗಳಿಗೆ ರಫ್ತು ಸರಕುಗಳನ್ನು ಭೂ ಕಸ್ಟಮ್ಸ್ ಸ್ಟೇಷನ್‌ಗಳು (ಎಲ್ ಸಿಎಸ್ ಗಳು) ಮೂಲಕ ಬಂದರುಗಳು ಅಥವಾ ವಿಮಾನ ನಿಲ್ದಾಣಗಳಿಗೆ ಕಂಟೇನರ್‌ಗಳು ಅಥವಾ ಮುಚ್ಚಿದ ಟ್ರಕ್‌ಗಳಲ್ಲಿ ಸಾಗಿಸುವುದನ್ನು ರದ್ದುಗೊಳಿಸಲಾಗಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇನ್ನುಮುಂದೆ ಬಾಂಗ್ಲಾದೇಶದ ಸರಕುಗಳು ಭಾರತದ ಭೂಪ್ರದೇಶ ಅಥವಾ ಸಮುದ್ರಮಾರ್ಗವಾಗಿ ಬೇರೆ ದೇಶಗಳಿಗೆ ರಫ್ತಾಗುವಂತಿಲ್ಲ. ವ್ಯಾಪಾರ ತಜ್ಞರ ಪ್ರಕಾರ, ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಈ ಸೌಲಭ್ಯವನ್ನು ರದ್ದುಗೊಳಿಸುವುದರಿಂದ ಜವಳಿ, ಪಾದರಕ್ಷೆಗಳು ಮತ್ತು ರತ್ನಗಳು ಮತ್ತು ಆಭರಣಗಳು ಸೇರಿದಂತೆ ಹಲವಾರು ಭಾರತೀಯ ರಫ್ತು ವಲಯಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.