ಭಾರತವು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ ಸನಿಹದಲ್ಲಿ ಸೈನಿಕರ ಸಂಚಾರವನ್ನು ಸುಗಮಗೊಳಿಸಲು ರಸ್ತೆಯೊಂದನ್ನು ನಿರ್ಮಾಣ ಮಾಡುತ್ತಿದೆ.
2017ರಲ್ಲಿ ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್‌ನಲ್ಲಿ ಘರ್ಷಣೆ ನಡೆದ ಸ್ಥಳದ ಬಳಿ ಭೂತಾನ್‌ನಲ್ಲಿ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಈ ರಸ್ತೆಯು ಡೋಕ್ಲಾಮ್‌ನಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿರುವ ಭೂತಾನ್‌ನ ಹಾ ಕಣಿವೆಯನ್ನು ಸಂಪರ್ಕಿಸುತ್ತದೆ.
ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸುಮಾರು 254 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಿಸಿದೆ. ಭೂತಾನ್‌ನ ಪ್ರಧಾನ ಮಂತ್ರಿ ತೊಬೈ ಶೆರಿಂಗ್ ಶುಕ್ರವಾರ ಈ ರಸ್ತೆಯನ್ನು ಉದ್ಘಾಟಿಸಿದರು. ಈ ರಸ್ತೆಯು ಭೂತಾನ್‌ನ ಸ್ಥಳೀಯ ಜನರಿಗೆ ಸಂಚಾರ ಸೌಲಭ್ಯವನ್ನು ಒದಗಿಸುವುದರ ಜತೆಗೆ ಅಗತ್ಯವಿದ್ದರೆ ಭದ್ರತಾ ಪಡೆಗಳ ಚಲನೆಯನ್ನು ಸುಗಮಗೊಳಿಸುತ್ತದೆ.
ಈ ರಸ್ತೆಯು ಟಿಬೆಟ್ ಸ್ವಾಯತ್ತ ಪ್ರದೇಶದ ಚುಂಬಿ ಕಣಿವೆಗೆ ತಲುಪುತ್ತದೆ. ಅಲ್ಲಿ ಚೀನಾದ ಸೈನಿಕರು ನಿಯೋಜನೆಗೊಂಡಿದ್ದಾರೆ. ಈ ರಸ್ತೆಯಿಂದ ಭೂತಾನ್ ಸೇನೆಗೆ ಚುಂಬಿ ಕಣಿವೆಯ ಗಡಿಗೆ ತಲುಪಲು ಮತ್ತು ಸರಬರಾಜು ಸಾಗಣೆಗೆ ಸಹಾಯವಾಗಲಿದೆ. ಭೂತಾನ್‌ಗೆ ಈಗ ಈ ರಸ್ತೆಯ ಲಾಭವಾದರೂ, ಭವಿಷ್ಯದಲ್ಲಿ ಭಾರತಕ್ಕೂ ಇದರಿಂದ ಪ್ರಯೋಜನವಾಗಲಿದೆ.