ಶುಭಮನ್ ಗಿಲ್ ಸಿಡಿಸಿದ ಶತಕದ ಮೂಲಕ ಭಾರತ ತಂಡ 6 ವಿಕೆಟ್ ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು 49.4 ಓವರ್ ಗಳಲ್ಲಿ 228 ರನ್ ಗೆ ಆಲೌಟ್ ಮಾಡಿದ ಭಾರತ ತಂಡ 47 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಗಳಿಸಿದೆ.
ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 69 ರನ್ ಪೇರಿಸುವ ಮೂಲಕ ಉತ್ತಮ ಚಾಲನ ನೀಡಿದರು. ಅದ್ಭುತ ಆರಂಭ ನೀಡಿದ ರೋಹಿತ್ ಶರ್ಮ 36 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 41 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾದರು.
ಸಾವಧಾನವಾಗಿ ಇನ್ನಿಂಗ್ಸ್ ಜೋಡಿಸಿದ ಗಿಲ್ 129 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 101 ರನ್ ಬಾರಿಸಿದರು. ಈ ಸಾಧನೆಯೊಂದಿಗೆ ಐಸಿಸಿ ಟೂರ್ನಿಯಲ್ಲಿ ಚೊಚ್ಚಲ ಹಾಗೂ ಸತತ ಎರಡನೇ ಹಾಗೂ ಒಟ್ಟಾರೆ 8ನೇ ಶತಕದ ಸಾಧನೆ ಮಾಡಿ ಪಂದ್ಯದ ಪ್ರಮುಖ ಆಕರ್ಷಣೆಯಾದರು. ಬಳಿಕ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 1 ಬೌಂಡರಿ ಸಹಾಯದಿಂದ 22 ರನ್ ಗಳಿಸಿ ನೆಲಕಚ್ಚಿಕೊಳ್ಳುವ ಹಂತದಲ್ಲಿ ಲೆಗ್ ಸ್ಪಿನ್ನರ್ ಗೆ ಮತ್ತೆ ವಿಕೆಟ್ ಒಪ್ಪಿಸಿ ನಿರಾಸೆ ಗೊಳಗಾದರು. ನಂತರ ಬಂದ ಶ್ರೇಯಸ್ ಅಯ್ಯರ್ (15) ಮತ್ತು ಅಕ್ಸರ್ ಪಟೇಲ್ (8) ಕೂಡ ಯಶಸ್ಸು ಕಾಣಲಿಲ್ಲ.
ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಆಡಲು ಬಂದು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಗಿಲ್ ಜೊತೆ ರಾಹುಲ್ 87 ರನ್ ಜೊತೆಯಾಟ ಭಾರತದ ಸುಲಭ ಗೆಲುವಿಗೆ ದಾರಿ ಮಾಡಿ ಕೊಟ್ಟು ಪ್ರಮುಖ ಪಾತ್ರ ವಹಿಸಿದರು. ರಾಹುಲ್ 47 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿ ಅಜೇಯರಾಗಿ ಉಳಿದರು. ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ರನ್ ಬಾರಿಸಿ ಸಂಭ್ರಮ ಮುಗಿಲು ಮುಟ್ಟಿಸಿದರು.