Menu

ಇಸಿ ಕಮಿಷನರ್ ವಿರುದ್ಧ ಮಹಾಭಿಯೋಗ ಪ್ರಸ್ತಾವನೆಗೆ ಇಂಡಿಯಾ ಮೈತ್ರಿಕೂಟ ನಿರ್ಧಾರ

ಮತ ಪರಿಷ್ಕರಣೆ ಅಕ್ರಮ ಮತ್ತು ಮತಗಳ್ಳತನದ ಆರೋಪದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇಂಡಿಯಾ ಮೈತ್ರಿಕೂಟ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ.

ಚುನಾವಣಾ ಆಯುಕ್ತರು ಮತಗಳ್ಳತನದ ಬಗ್ಗೆ ಪ್ರಮಾಣ ಪತ್ರ ನೀಡಿ ಇಲ್ಲವೆ ಕ್ಷಮೆ ಕೇಳುವಂತೆ ಸೂಚಿಸಿದ ಬೆನ್ನಲ್ಲೇ ಜ್ಞಾನೇಶ್ ವಿರುದ್ಧ ಹೋರಾಟವನ್ನು ಇಂಡಿಯಾ ಮೈತ್ರಿಕೂಟ ಮತ್ತಷ್ಟು ತೀವ್ರಗೊಳಿಸಿ ಮಹಾಭಿಯೋಗ ಪ್ರಸ್ತಾವನೆಗೆ ನಿರ್ಧರಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸದನ ನಾಯಕರ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನೋಟಿಸ್ ಸಲ್ಲಿಸುವ ಯೋಜನೆ ಹೊಂದಿದ್ದು, ಶೀಘ್ರದಲ್ಲೇ ಮಹಾಭಿಯೋಗದ ವಿಧಾನಗಳನ್ನು ರೂಪಿಸಲಾಗುವುದು ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮತಗಳ್ಳತನ ಆರೋಪದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಆರೋಪ ಸಂಬಂಧ 7 ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಇಲ್ಲದಿದ್ದರೆ ದೇಶದ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದರು.
ಇದರಿಂದ ಕೆರಳಿದ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ಮಂಡಿಸಲು ಸಜ್ಜಾಗಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಹಾಗೂ ಬೆಂಗಳೂರಿನಲ್ಲಿ ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇದರಿಂದ ಚುನಾವಣಾ ಆಯೋಗ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಇಂಡಿಯಾ ಮೈತ್ರಿಕೂಟದ ನಾಯಕರು ಮತಗಳ್ಳತನದ ವಿರುದ್ದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ವಿರುದ್ಧ ಕಳೆದ ಹಲವು ದಿನಗಳಿಂದ ಸಂಸತ್ತಿನ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು 7 ದಿನಗಳ ಗಡುವು ನೀಡಿರುವುದು ಕಾಂಗ್ರೆಸ್ ಮತ್ತು ಇಂಡಿಯಾ ನಾಯಕರನ್ನು ಕೆರಳಿಸಿದ್ದು ಮಹಾಭಿಯೋಗದ ಮೂಲಕ ಅಧಿಕಾರದಿಂದ ಮುಖ್ಯ ಚುನಾವಣಾ ಆಯುಕ್ತರನ್ನು ಕೆಳಗಿಳಿಸಲು ಸಿದ್ಧತೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *