ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ತಹಸೀಲ್ದಾರ್‌ಗಳು ಆದೇಶ ಹೊರಡಿಸಿದ್ದಾರೆ.
ಗುರುವಾರದಿಂದ ಹೊಸನಗರ ತಾಲೂಕಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹೊಸನಗರದ ಮಾಸ್ತಿಕಟ್ಟೆ, ಹುಲಿಕಲ್, ನಗರ, ಯಡೂರು ಭಾಗದಲ್ಲಿ ವಿಪರೀತ ಮಲೆಯಾಗುತ್ತಿದೆ. ಸಾಗರ ತಾಲೂಕಿನ ಕಾರ್ಗಲ್, ಜೋಗ, ತಾಳಗುಪ್ಪ ಸೇರಿದಂತೆ ಹಲವೆಡೆ ಮಳೆ ತೀವ್ರಗೊಂಡಿದೆ.
ಶುಕ್ರವಾರ ಬೆಳಗ್ಗೆಯೇ ಭಾರೀ ಗಾಳಿಯೊಂದಿಗೆ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳಲ್ಲಿ ನದಿ ನೀರಿನ ಒಳ ಹರಿವು ಪ್ರಮಾಣ ಏರಿಕೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲೂ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಹೈರಾಣಾಗಿದೆ. ಬೈಂದೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.