ಭಾಷೆ ಬಳಸುವುದರಿಂದ ಬೆಳೆಯುತ್ತದೆ. ಆದರೆ, ಈಗ ತಂತ್ರಜ್ಞಾನದ ಓಟದಲ್ಲಿ ನಮ್ಮಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಾ ಕೇವಲ ನೋಡುವ ಸಂಸ್ಕೃತಿ ಬೆಳೆಯುತ್ತಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಕೆ.ಎಂ.ಎಫ್ ಕಲಾವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದೇ ಕನ್ನಡ ಮಣ್ಣಿನ ಮೌಲ್ಯ. ಕರ್ನಾಟಕ ರಾಜ್ಯ ಉದಯದ ನಿಜವಾದ ಆಶಯ ಕೇವಲ ಭೌಗೋಳಿಕ ಗಡಿಗಳನ್ನು ಒಂದುಗೂಡಿಸುವುದಲ್ಲ, ಬದಲಿಗೆ ಕನ್ನಡ ಸಂಸ್ಕೃತಿಯ ಹಾಗೂ ಕನ್ನಡಿಗರ ಸಾಮಾಜಿಕ-ಆರ್ಥಿಕ ಸಮಾನತೆಯ ಕನಸಾಗಿತ್ತು ಎಂದರು.
ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕರ್ನಾಟಕ ಏಕೀಕರಣ ಆಗಿದೆ. ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳ ಜನರ ಅಭಿವೃದ್ಧಿ ಮತ್ತು ದಮನಿತ ಸಮುದಾಯಗಳ ಏಳಿಗೆಯ ಆಶಯ ಕರ್ನಾಟಕ ರಾಜ್ಯ ಉದಯದ ಹಿಂದಿನ ಪ್ರಮುಖ ಆಶಯವಾಗಿತ್ತು.
“ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ’ದ ಕಲ್ಪನೆ ರೂಪುಗೊಂಡಿದ್ದು ಹೀಗೆಯೇ. ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಮಾತು ಕನ್ನಡ ಸಂಸ್ಕೃತಿಯ ಮೌಲ್ಯವಾಗಿದ್ದು, ಅದನ್ನು ಸಾಧಿಸುವಲ್ಲಿ ನಾವು ಎಷ್ಟು ಯಶಸ್ವಿಯಾಗಿದ್ದೇವೆ ಎಂಬುದರ ಕುರಿತು ಅವಲೋಕಿಸಬೇಕಿದೆ ಎಂದು ಹೇಳಿದರು.
ಸ್ವಾವಲಂಭಿ-ಸ್ವಾಭಿಮಾನಿ ಕರ್ನಾಟಕ ನಿರ್ಮಾಣವೇ ರಾಜ್ಯೋತ್ಸವದ ಗುರಿಯಾಗಿದೆ.ಈ ರಾಜ್ಯೋತ್ಸವ ಆಯೋಜಿಸಿರುವ KMF ಕನ್ನಡ ನಾಡಿನ ಹೆಮ್ಮೆಯ ಸ್ವಾಭಿಮಾನಿ ಸಂಸ್ಥೆಯಾಗಿದೆ. ನಮ್ಮ ಭಾಷಾಪ್ರೇಮ ಕೂಡ KMF ಹಾಲು-ತುಪ್ಪದಷ್ಟೇ ಶುಭ್ರವಾಗಿರಲಿ ಎಂದು ಆಶಿಸುತ್ತೇನೆ.
ಹೀಗಾಗಿ ರಾಜ್ಯೋತ್ಸವ ನವೆಂಬರ್ 1 ರ ಒಂದು ದಿನದ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ, ಕನ್ನಡ ಭಾಷೆ ಮತ್ತು ಪರಂಪರೆಯ ಮೌಲ್ಯವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಕರ್ತವ್ಯವಾಗಬೇಕಿದೆ. ಸ್ವಾಭಿಮಾನಿ ಕರ್ನಾಟಕದ ನಿರ್ಮಾಣದಲ್ಲಿ ನಾಡಿನ ಪ್ರತಿಯೊಬ್ಬರೂ ಸರ್ಕಾರವನ್ನು ಅವಲಂಬಿಸದೆ, ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ರಕ್ಷಣೆಗೆ, ಬೆಳವಣಿಗೆಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಅದೇ ರೀತಿ ಹಾಲು ಸಂಗ್ರಹ ಮತ್ತು ಮಾರಾಟದಲ್ಲಿ ವಿಷಯದಲ್ಲಿ ಕನ್ನಡಿಗರೇ ಹುಟ್ಟುಹಾಕಿದ ಕೆಎಂಎಫ್‌ನ ಅಸ್ಮಿತೆ ದೊಡ್ಡದು ಎಂದರು.
1974ರಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ (KDDC) ಆಗಿ ಕೆಎಂಎಫ್ ಅನ್ನು ಸ್ಥಾಪಿಸಲಾಯಿತು. ಕರ್ನಾಟಕ ಏಕೀಕರಣಗೊಂಡು ಇಪ್ಪತ್ತು ವರ್ಷಗಳ ನಂತರ ಕೆಎಂಎಫ್ ಅಸ್ತಿತ್ವಕ್ಕೆ ಬಂತು. ಹಾಲು ಸಂಗ್ರಹ ಮತ್ತು ಮಾರಾಟದ ವಿಷಯದಲ್ಲಿ ಕೆಎಂಎಫ್ ಅಗ್ರಸ್ಥಾನದಲ್ಲಿದೆ ಮತ್ತು ನಾಡಿನ ಸ್ವಾಭಿಮಾನಿ ಮತ್ತು ಸ್ವಾವಲಂಭನೆ ಸಾಧಿಸಿರುವ ಸಂಸ್ಥೆಯಾಗಿದೆ. ದೇಶದಲ್ಲಿ ಎರಡನೇ ದೊಡ್ಡ ಹಾಲು ಸಹಕಾರಿ ಸಂಸ್ಥೆ ಎಂಬ ಖ್ಯಾತಿಗೂ ಒಳಗಾಗಿದೆ. ಹಾಲು ಸಂಗ್ರಹ ಹಾಗೂ ಪೂರೈಕೆ ವಿಚಾರದಲ್ಲಿ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿರುವ ಸಂಸ್ಥೆ ಎನ್ನಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ನಿತ್ಯದ ಅಗತ್ಯಗಳಲ್ಲಿ ಹಾಲು ಎಷ್ಟು ಮುಖ್ಯವೋ ಹಾಗೆಯೇ ಏನೇ ಮುಂದುವರಿದರೂ ಮಾತೃಭಾಷೆಯೆಂಬುದು ಅಷ್ಟೆ ಮುಖ್ಯ. ಭಾಷೆ ಹಾಗೂ ಭಾವ ಕಲುಷಿತಗೊಳ್ಳುತ್ತಿರುವ ಹೊತ್ತಿನಲ್ಲಿ ಭಾಷಾಪ್ರೇಮವನ್ನು ಹಾಲಿನಂತೆ ಶುಭ್ರವಾಗಿ ಇಟ್ಟುಕೊಳ್ಳುವು ದರ ಅಗತ್ಯವಿದೆ ಎಂದು ಕರೆ ನೀಡಿದರು. ಮಹಾಮಂಡಳದ ಎಂಡಿ ಶಿವಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಚಲಚಲನಚಿತ್ರ ನಟರಾದ ರಮೇಶ್ ಭಟ್, ನಟಿ ಪದ್ಮಾವಾಸಂತಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.


